ಕಾಸರಗೋಡು, ಜು. 02 (DaijiworldNews/TA): ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಕಾಸರಗೋಡು ಜಿಲ್ಲಾ ಘಟಕದ ಜಂಟಿ ಆಶ್ರಯದಲ್ಲಿ ಕನ್ನಡ ಪತ್ರಿಕಾ ದಿನಾಚರಣೆ ಹಾಗೂ ಪತ್ರಿಕಾ ದಿನ ಪ್ರಶಸ್ತಿ ಪ್ರದಾನ ಸಮಾರಂಭ ಕುಂಬಳೆಯ ನಾಯ್ಕಾಪು ಲಿಟಲ್ ಲಿಲ್ಲಿ ಆಂಗ್ಲ ಮಾಧ್ಯಮ ಶಾಲಾ ಸಭಾಂಗಣದಲ್ಲಿ ನಡೆಯಿತು.

ಸಮಾರಂಭವನ್ನು ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಅಧ್ಯಕ್ಷ ಡಾ, ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ ಉದ್ಘಾಟಿಸಿ ಮಾತನಾಡಿದರು. ಈ ಸಂದರ್ಭ ಪತ್ರಿಕಾ ವಿತರಣಾ ರಂಗದಲ್ಲಿ ಸುದೀರ್ಘ ಹಾಗೂ ನಿಸ್ವಾರ್ಥ ಸೇವೆ ಸಲ್ಲಿಸಿದ ಹಿರಿಯ ಪತ್ರಿಕಾ ವಿತರಕ ಶ್ಯಾಮಪ್ರಸಾದ್ ಎನ್. ಅವರಿಗೆ ಈ ವರ್ಷದ 'ಪತ್ರಿಕಾ ದಿನ' ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪ್ರಶಸ್ತಿ ಪ್ರಧಾನ ಮಾಡಿ ಮಾತನಾಡಿದ ಜಿಲ್ಲಾ ಪಂಚಾಯತ್ ಸದಸ್ಯ ಸೋಮಶೇಖರ ಜೆ . ಎಸ್ .ರವರು , ಪತ್ರಿಕೆಗಳು ಹಾಗೂ ಪತ್ರಕರ್ತರು ಹಲವು ಸವಾಲುಗಳನ್ನು ಎದುರಿಸುತ್ತಿವೆ. ಪತ್ರಿಕೆಗಳ ಮಾರಾಟದಲ್ಲಿನ ಕುಸಿತ , ಜಾಹಿರಾತುಗಳ ಇಳಿಕೆ ಜೊತೆಗೆ ಪತ್ರಕರ್ತರಿಗೆ ಸೂಕ್ತ ವೇತನ ಲಭಿಸದ ಸ್ಥಿತಿ ಉಂಟಾಗಿದೆ. ಆದರೂ ಗಡಿನಾಡಿನಲ್ಲಿ ಪತ್ರಕರ್ತರ ಸೇವೆ ಮಾದರಿಯಾದುದು ಎಂದು ಹೇಳಿದರು.
ಹಿರಿಯ ಕವಿ , ಶಿಕ್ಷಣ ತಜ್ಞ ವಿ . ಬಿ ಕುಳಮರ್ವ ಪತ್ರಿಕಾ ದಿನದ ಸಂದೇಶ ನೀಡಿದರು. ಜಿಲ್ಲಾ ಕನ್ನಡ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ರವಿ ನಾಯ್ಕಾಪು ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯತ್ ಸದಸ್ಯ ರಾಮಪ್ಪ , ಮಂಜೇಶ್ವರ , ಕಾಸರಗೋಡು ಬ್ಲಾಕ್ ಪಂಚಾಯತ್ ಸದಸ್ಯ ಪ್ರಥ್ವಿ ರಾಜ್ ಶೆಟ್ಟಿ , ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಎ.ಆರ್ ಸುಬ್ಬಯ್ಯಕಟ್ಟೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.