ಮಂಗಳೂರು, ಸೆ.08(Daijiworld News/SS): ಕರಾವಳಿಯಾದ್ಯಂತ ಇಂದು ಕ್ರೈಸ್ತ ಸಮುದಾಯದವರು ಹೊಸ ಹುಮ್ಮಸ್ಸಿನೊಂದಿಗೆ, ಹೊಸ ಸಂಭ್ರಮದೊಂದಿಗೆ ತೆನೆ ಹಬ್ಬ ಆಚರಿಸುತ್ತಿದ್ದಾರೆ. ಸೆಪ್ಟೆಂಬರ್ 8 ಮಾತೆ ಮರಿಯಮ್ಮನ ಜನ್ಮದಿನ. ಇದನ್ನು ‘ಮೊಂತಿ ಫೆಸ್ತ್’ ಎಂದು ಕರೆಯಲಾಗುತ್ತದೆ. ಜಗತ್ತಿನೆಲ್ಲೆಡೆ ಮಾತೆ ಮೇರಿ ಜನ್ಮ ದಿನವನ್ನು ಕ್ರೈಸ್ತ ಧಾರ್ಮಿಕ ಕಟ್ಟುಪಾಡುಗಳ ಕಟ್ಟಳೆಯೊಂದಿಗೆ ಆಚರಿಸಿದರೆ, ಕರಾವಳಿಯ ಕ್ರೈಸ್ತರು ಮಾತ್ರ ಇದನ್ನು ಪ್ರಕೃತಿ ಆರಾಧನೆಯ ತೆನೆಹಬ್ಬವಾಗಿ ಆಚರಿಸುವುದು ವಿಶೇಷ.
9 ದಿನಗಳ ವಿಶೇಷ ಪ್ರಾರ್ಥನೆಯ ಬಳಿಕ ಬರುತ್ತಿರುವ ಹೊಸತೆನೆಯ ಹಬ್ಬಕ್ಕಾಗಿ ಕ್ರೈಸ್ತ ಬಾಂಧವರ ಮನೆ-ಮನಗಳಲ್ಲಿ ಸಂಭ್ರಮ ಮನೆಮಾಡಿದೆ. ಯೇಸು ಕ್ರಿಸ್ತರ ತಾಯಿ ಮೇರಿ ಮಾತೆಯ ಜನ್ಮ ದಿನ ಸೆಪ್ಟಂಬರ್ 8 ಆಗಿದ್ದು, ಮೇರಿ ಮಾತೆ ದೇವ ಮಾತೆಯಾಗಿದ್ದು, ಪವಾಡಗಳನ್ನು ಸೃಷ್ಟಿಸುತ್ತಾರೆ ಮತ್ತು ಭಕ್ತಾಧಿಗಳ ಬೇಡಿಕೆಗಳನ್ನು ಈಡೇರಿಸುತ್ತಾರೆ ಎನ್ನುವುದು ಕ್ರೈಸ್ತರ ನಂಬಿಕೆ.
ದೇವ ಮಾತೆಯ ಜನ್ಮ ದಿನ ಎಂಬ ಹಿನ್ನೆಲೆಯಲ್ಲಿ ಈ ತೆನೆ ಹಬ್ಬಕ್ಕೆ ಧಾರ್ಮಿಕ ಲೇಪ ಕೊಡಲಾಗಿದೆ. ಇನ್ನು ಬೆಳೆ ಹಬ್ಬ ಆಗಿರುವುದರಿಂದ ಇದು ಸಾಂಸ್ಕತಿಕ ಆಚರಣೆಯೂ ಆಗಿದೆ. ಹೀಗೆ ಮೇರಿ ಮಾತೆಯ ಜನ್ಮ ದಿನಾಚರಣೆಯ ಜತೆಗೆ ಬೆಳೆ ಹಬ್ಬವನ್ನೂ ಥಳಕು ಹಾಕಿಕೊಂಡು ಮೊಂತಿ ಫೆಸ್ತ್ ಆಚರಿಸಲಾಗುತದೆ.
ಈ ದಿನ ಕುಟುಂಬ ಸದಸ್ಯರೆಲ್ಲ ಸೇರಿಕೊಂಡು ರುಚಿ ರುಚಿಯಾದ ಖಾದ್ಯಗಳನ್ನು ಸವಿಯುವುದರ ಜತೆಗೆ ಕೌಟುಂಬಿಕ ಬಾಂಧವ್ಯ ಬೆಸೆಯುವ ಹಬ್ಬದಲ್ಲಿ ಪ್ರಕೃತಿ ಆರಾಧನೆಯ ಸಂಭ್ರಮ ಸವಿಯಲಿದ್ದಾರೆ.