ಕಾಂಞಂಗಾಡ್, ಜು. 07 (DaijiworldNews/TA): ನಿನ್ನೆ ರಾತ್ರಿ ಬೀಸಿದ ಭಾರೀ ಬಿರುಗಾಳಿಯ ಪರಿಣಾಮವಾಗಿ ಕಾಂಞಂಗಾಡ್ ಸೌತ್ ಸರ್ಕಾರಿ ವೊಕೇಶನಲ್ ಹಯರ್ ಸೆಕೆಂಡರಿ ಶಾಲೆಯ ಕಟ್ಟಡಕ್ಕೆ ಹಾನಿಯಾಗಿದೆ. ಶಾಲೆಯ ಎರಡನೇ ಮಹಡಿಯ ತರಗತಿ ಕೊಠಡಿಗಳ ಮೇಲ್ಭಾಗದಲ್ಲಿದ್ದ ರೂಫಿಂಗ್ ಶೀಟ್ಗಳು ಬಿರುಗಾಳಿಯ ತೀವ್ರತೆಗೆ ಸಂಪೂರ್ಣವಾಗಿ ಕಿತ್ತು ಹಾರಿ ಹೋಗಿವೆ.

ಹಾರಿಹೋದ ಶೀಟ್ಗಳು ಶಾಲೆಯ ಆವರಣದಲ್ಲಿದ್ದ ತೆಂಗಿನ ಮರಗಳ ಮೇಲೆ ಸಿಲುಕಿಕೊಂಡಿದ್ದು, ಘಟನೆಯಿಂದ ಸುತ್ತಮುತ್ತಲಿನ ಮರಗಳಿಗೂ ಹಾನಿಯಾಗಿದೆ. ಘಟನೆ ರಾತ್ರಿ ವೇಳೆ ಸಂಭವಿಸಿದ್ದರಿಂದ ಶಾಲೆಯಲ್ಲಿ ವಿದ್ಯಾರ್ಥಿಗಳು ಅಥವಾ ಸಿಬ್ಬಂದಿ ಯಾರೂ ಇರಲಿಲ್ಲ. ಹೀಗಾಗಿ ಯಾವುದೇ ಪ್ರಾಣಹಾನಿ ಅಥವಾ ಗಾಯಗಳಾಗಿಲ್ಲ.
ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಮರಗಳ ಮೇಲೆ ಸಿಲುಕಿದ್ದ ರೂಫಿಂಗ್ ಶೀಟ್ಗಳನ್ನು ಸುರಕ್ಷಿತವಾಗಿ ತೆರವುಗೊಳಿಸುವ ಕಾರ್ಯಾಚರಣೆ ನಡೆಸಿದರು. ಈ ಅವಘಡದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಮಂಗಳವಾರ ಶಾಲೆಗೆ ರಜೆ ಘೋಷಿಸಲಾಗಿದೆ. ಹಾನಿಗೊಳಗಾದ ಕಟ್ಟಡದ ಪರಿಶೀಲನೆ ಹಾಗೂ ದುರಸ್ತಿ ಕಾರ್ಯಗಳನ್ನು ಸಂಬಂಧಿತ ಅಧಿಕಾರಿಗಳು ಕೈಗೊಂಡಿದ್ದಾರೆ.