ಕುಂದಾಪುರ, ಜು. 07 (DaijiworldNews/AK): ಎರಡು ಬೈಕ್ಗಳು ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಹಿನ್ನಲೆ ಇಬ್ಬರು ಸಾವನ್ನಪ್ಪಿದ್ದ ಘಟನೆ ತ್ರಾಸಿ ಬೀಚ್ ಬಳಿಯ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ನಡೆದಿದೆ.

ಮೃತರನ್ನು ಭಟ್ಕಳದ ಬೆಂಗ್ರೆ ಅಳಿವೇಕೋಡಿ ನಿವಾಸಿ ದೀಪಕ್ ನಾಗಪ್ಪ ನಾಯ್ಕ್ (23) ಮತ್ತು ಪಡುಕೋಣೆಯ ಹಡವು ನಿವಾಸಿ ಪೆಟ್ರಿಕ್ ವಾಸ್ (63) ಎಂದು ಗುರುತಿಸಲಾಗಿದೆ.
ಸೋಮವಾರ ಮಧ್ಯಾಹ್ನ ತ್ರಾಸಿ ಬೀಚ್ ಬಳಿಯ ಅರಮ ದೇವಸ್ಥಾನದ ಮುಂದೆ ಈ ಅಪಘಾತ ಸಂಭವಿಸಿದೆ. ದೀಪಕ್ ಭಟ್ಕಳದಿಂದ ಕುಂದಾಪುರ ಕಡೆಗೆ ತನ್ನ ಬೈಕ್ನಲ್ಲಿ ಹೋಗುತ್ತಿದ್ದಾಗ, ಪೆಟ್ರಿಕ್ ಸವಾರಿ ಮಾಡುತ್ತಿದ್ದ ಮತ್ತೊಂದು ಬೈಕ್ ಅವರ ವಾಹನಕ್ಕೆ ಮುಖಾಮುಖಿ ಡಿಕ್ಕಿ ಹೊಡೆದಿದೆ.
ಗಂಭೀರ ಗಾಯಗೊಂಡ ದೀಪಕ್ ಅವರನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆಯೇ ಕೊನೆಯುಸಿರೆಳೆದರು. ಪೆಟ್ರಿಕ್ ಮತ್ತು ಅವರ ಜೊತೆ ಹಿಂಬದಿ ಸವಾರರಾಗಿದ್ದ ಅವರ ಮಗಳು ಡಿಕ್ಕಿಯ ಪರಿಣಾಮ ತೀವ್ರವಾಗಿ ಗಾಯಗೊಂಡು ಮಣಿಪಾಲದ ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ, ಚಿಕಿತ್ಸೆಗೆ ಸ್ಪಂದಿಸದ ಪೆಟ್ರಿಕ್ ಮಂಗಳವಾರ ಮುಂಜಾನೆ ನಿಧನರಾದರು.
ಪೆಟ್ರಿಕ್ ಈ ಹಿಂದೆ ವಿದೇಶದಲ್ಲಿ ಉದ್ಯೋಗದಲ್ಲಿದ್ದರು ಮತ್ತು ಎರಡು ವರ್ಷಗಳ ಹಿಂದೆ ನಿವೃತ್ತಿ ಹೊಂದಿದ ನಂತರ ತಮ್ಮ ಊರಿಗೆ ಮರಳಿದ್ದರು, ಅಲ್ಲಿ ಅವರು ವೆಲ್ಡಿಂಗ್ ಅಂಗಡಿ ನಡೆಸುತ್ತಿದ್ದರು. ಕೆಲವು ಸಂಬಂಧಿಕರನ್ನು ಭೇಟಿ ಮಾಡಿ ಮನೆಗೆ ಹಿಂದಿರುಗುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಅವರು ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.