ಬಂಟ್ವಾಳ, ಜುಲೈ 7 (DaijiworldNews/TA): ತಾಲೂಕಿನಾದ್ಯಂತ ಸುರಿಯುತ್ತಿರುವ ಭಾರೀ ಗಾಳಿ-ಮಳೆಯ ಪರಿಣಾಮ ವಿವಿಧ ಗ್ರಾಮಗಳ ಐದು ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಮರಗಳು ಉರುಳಿ ಹಾಗೂ ಮಣ್ಣು ಕುಸಿದು ಮನೆಗಳ ಮೇಲೆ ಬಿದ್ದಿದ್ದರೂ, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.




ಅಮ್ಮುಂಜೆ, ಮುಡೈಕೋಡಿಕುಳ, ಕನ್ಯಾನ, ಪುದು ಹಾಗೂ ಪಾಣೆಮಂಗಳೂರಿನ ಬೋಳಂಗಡಿ ಪ್ರದೇಶಗಳಲ್ಲಿ ಮನೆಗಳು ಮತ್ತು ಉಪಕಟ್ಟಡಗಳ ಮೇಲೆ ಮರಗಳು ಹಾಗೂ ಮಣ್ಣು ಕುಸಿದು ಬಿದ್ದ ಪರಿಣಾಮ ಹಾನಿ ಉಂಟಾಗಿದೆ. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಕಂದಾಯ ಇಲಾಖೆ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳು ಹಾನಿಗೊಳಗಾದ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಾನಿಯ ಮೌಲ್ಯಮಾಪನ ಕಾರ್ಯವೂ ಆರಂಭಿಸಲಾಗಿದೆ.
ತಾಲೂಕಿನಲ್ಲಿ ಇನ್ನೂ ಭಾರೀ ಮಳೆ ಮುಂದುವರಿಯುವ ಸಾಧ್ಯತೆ ಇರುವುದರಿಂದ ತಗ್ಗು ಪ್ರದೇಶಗಳು, ಗುಡ್ಡದ ತಪ್ಪಲಿನ ನಿವಾಸಿಗಳು ಹಾಗೂ ಅಪಾಯದ ಪ್ರದೇಶಗಳಲ್ಲಿ ವಾಸಿಸುವವರು ಹೆಚ್ಚಿನ ಎಚ್ಚರಿಕೆ ವಹಿಸಬೇಕು ಎಂದು ಅಧಿಕಾರಿಗಳು ಸೂಚಿಸಿದ್ದಾರೆ. ಅನಗತ್ಯವಾಗಿ ಅಪಾಯಕಾರಿ ಪ್ರದೇಶಗಳಿಗೆ ತೆರಳುವುದನ್ನು ತಪ್ಪಿಸಿ, ಜಿಲ್ಲಾಡಳಿತ ಹಾಗೂ ಹವಾಮಾನ ಇಲಾಖೆಯ ಸೂಚನೆಗಳನ್ನು ಪಾಲಿಸುವಂತೆ ಸಾರ್ವಜನಿಕರಿಗೆ ಮನವಿ ಮಾಡಲಾಗಿದೆ.