ಮಂಗಳೂರು,ಸೆ 08 (Daijiworld News/RD): ಐಎಎಸ್ ಅಧಿಕಾರಿ ಸಸಿಕಾಂತ್ ಸೆಂಥಿಲ್ ರಾಜೀನಾಮೆ ವಿಚಾರಕ್ಕೆ ಸಂಬಂಧಿಸಿದಂತೆ, ದ.ಕ ಲಾರಿ ಮಾಲಕರ ಸಂಘ ಮತ್ತು ಮರಳು ಗುತ್ತಿಗೆದಾರ ಸಂಘ ಸಸಿಕಾಂತ್ ಸೆಂಥಿಲ್ ವಿರುದ್ದ ಗಂಭೀರ ಭ್ರಷ್ಟಾಚಾರದ ಆರೋಪವನ್ನು ಹೊರಿಸಿದರು.
ದ.ಕ ಜಿಲ್ಲಾಧಿಕಾರಿಯಾಗಿದ್ದ ಸಸಿಕಾಂತ್ ಸೆಂಥಿಲ್ ವಿರುದ್ದ, ಮಂಗಳೂರಿನಲ್ಲಿ ಇಂದು ಪತ್ರಿಕಾಗೋಷ್ಠಿ ಹಮ್ಮಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಲಾರಿ ಮಾಲಕರ ಸಂಘದ ಅಧ್ಯಕ್ಷ ಜೈರಾಜ್ ಶೆಟ್ಟಿ, ಮರಳುಗಾರಿಕೆ ವಿಚಾರದಲ್ಲಿ ಸಸಿಕಾಂತ್ ಸೆಂಥಿಲ್ ಅವರು ಮಾಡಿರುವ ಹಗರಣಗಳ ಬಗ್ಗೆ ಆರೋಪಗಳ ಸುರಿಮಳೆ ವ್ಯಕ್ತಪಡಿಸಿದರು.
ಹಳೆಯಂಗಡಿ ಮೀನುಗಾರಿಕಾ ಬಂದರಿನ ಹೂಳೆತ್ತಿ ಸಂಗ್ರಹಿಸಿದ 10 ಸಾವಿರ ಮೆಟ್ರಿಕ್ ಟನ್ ಮರಳು ವಿಲೇವಾರಿ ಅಕ್ರಮ, ಮರಳು ಲಾರಿಗೆ ಜಿಪಿಎಸ್ ಅಳವಡಿಸಲು ಕಪ್ಪು ಪಟ್ಟಿಗೆ ಸೇರಿದ ಸಂಸ್ಥೆಗೆ ಟೆಂಡರ್, ಸರಕಾರದ ಅಧಿಕೃತ ಅದೇಶವಿಲ್ಲದೇ ಅಕ್ರಮ ಸ್ಯಾಂಡ್ ಬಜಾರ್ ಆಪ್ ರಚನೆ, ತುಂಬೆ ಡ್ಯಾಂ ಹೂಳೆತ್ತುವಿಕೆಯಲ್ಲಿ ಟೆಂಡರ್ ಅಕ್ರಮ, ಅಕ್ರಮ ಮರಳು ಎಂದು ವಶಕ್ಕೆ ಪಡೆದ ಮರಳು ವಿತರಣೆಯಲ್ಲಿ ಅಕ್ರಮ, ಮರಳು ವಿತರಣೆಯಲ್ಲಿ ರಾಜಕೀಯ ವ್ಯಕ್ತಿಗೆ ಡಿಸಿ ಬೆಂಬಲ ಆರೋಪ, ಜಿಲ್ಲಾಧಿಕಾರಿ ಮತ್ತು ಮಾಜಿ ಸಚಿವರ ಹಸ್ತಕ್ಷೇಪದ ಆರೋಪ, ಮಾಜಿ ಸಚಿವ ಯು.ಟಿ.ಖಾದರ್ ವಿರುದ್ದವೂ ಪರೋಕ್ಷ ಆರೋಪ, 3 ಸಾವಿರ ಮೌಲ್ಯದ ಮರಳು 14 ಸಾವಿರಕ್ಕೆ ಏರಿಕೆಯಾಗುವುದಕ್ಕೆ ಡಿಸಿಯೇ ಕಾರಣ. ಈ ಎಲ್ಲಾ ಹಗರಣಗಳ ಬಗ್ಗೆ ಲೋಕಾಯುಕ್ತ ದೂರು ಸಲ್ಲಿಕೆಗೆ ಸಂಘ ನಿರ್ಧಾರಿಸಿದೆ ಎಂದರು.