ಉಡುಪಿ, ಸೆ 10 (Daijiworld News/RD): ತ್ರಿವಳಿ ತಲಾಖ್ ಕಾನೂನು ಜಾರಿಯಾದ ನಂತರ ಉಡುಪಿ ಜಿಲ್ಲೆಯಲ್ಲಿ ಮೊದಲ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಸೋಮವಾರ ತಡ ರಾತ್ರಿ ಪೊಲೀಸರು ಬಂಧಿಸಿದ್ದಾರೆ.
ತ್ರಿವಳಿ ತಲಾಖ್ ನೀಡಿದ ಪತಿಯ ವಿರುದ್ಧ ಪತ್ನಿ ನೀಡಿದ ದೂರಿನಂತೆ ಹಿರಿಯಡಕ ನಿವಾಸಿ ಹನೀಫ್ ಸಯ್ಯದ್ (32), ಎಂಬಾತನನ್ನು ಕುಂದಾಪುರ ಪೊಲೀಸರು ತಡ ರಾತ್ರಿ ಬಂಧಿಸಿ, ಆರೋಪಿಗೆ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ. ಠಾಣೆಯಲ್ಲಿ ಸೆಕ್ಷನ್ 4ರ ಮುಸ್ಲಿಂ ಮಹಿಳೆಯರ ವಿವಾಹ ರಕ್ಷಣಾ ಕಾಯಿದೆ ಹಕ್ಕಿನಡಿ ಕೇಸು ದಾಖಲಾಗಿತ್ತು. ಜತೆಗೆ ವರದಕ್ಷಿಣೆ ಕಿರುಕುಳ ಹಾಗೂ ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆಯಡಿ ಅಪರಾಧವು ಸೇರಿರುವ ಹಿನ್ನಲೆಯಲ್ಲಿ ಪ್ರಕರಣವನ್ನು ದಾಖಲಿಸಿದ್ದಾರೆ.
ಕುಂದಾಪುರ ತಾಲೂಕು ಮೂಡುಗೋಪಾಡಿಯ ಮಹಿಳೆ ಅಲ್ಫಿಯಾ ಅಖ್ತರ್ ಕುಂದಾಪುರ ನಗರ ಠಾಣೆಯಲ್ಲಿ ಭಾನುವಾರ ದೂರು ನೀಡಿದ್ದು, ’ಪತಿ ಹನೀಫ್ ಜತೆ ತನಗೆ ಈ ವರ್ಷ ಜುಲೈ. 4ಕ್ಕೆ ಮೂಡುಗೋಪಾಡಿಯಲ್ಲಿ ಮದುವೆಯಾಗಿದ್ದು, ಪತಿ ಮನೆಯವರು 5 ಲ. ರೂ. ವರದಕ್ಷಿಣೆ ಕೇಳಿದ್ದರು, ನಾವು 2 ಲ. ರೂ. ನೀಡಿದ್ದೆವು. ಇದೇ ಕಾರಣ ನೀಡಿ ಪತಿ ಹಾಗೂ ಮನೆಯವರು ನಿತ್ಯ ಕಿರುಕುಳ ನೀಡುತ್ತಿದ್ದರು. ಆ. 15ರಂದು ಪತಿ ತನಗೆ ನಿಷೇಧಿತ ತ್ರಿವಳಿ ತಲಾಖ್ ನೀಡಿದ್ದಾರೆ’ ಎಂದು ಅಲ್ಫಿಯಾ ದೂರಿನಲ್ಲಿ ತಿಳಿಸಿದ್ದಾರೆ. ಈ ವಿಚಾರವಾಗಿ ಪತಿಯ ತಂದೆ ಅಬ್ಟಾಸ್ ಸಯ್ಯದ್, ತಾಯಿ ಜೈತುನ್ ಹಾಗೂ ಅಕ್ಕ ಆಯೇಷಾ ಕಿರುಕುಳ ನೀಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.