ಮಂಗಳೂರು, ಜು. 26 (DaijiworldNews/AK): ತುಳುನಾಡಿನ ಭಾಷೆ, ಸಂಸ್ಕೃತಿ, ಸಂಪ್ರದಾಯ ಹಾಗೂ ಆಹಾರ ವೈವಿಧ್ಯತೆಯನ್ನು ಪರಿಚಯಿಸುವ ಉದ್ದೇಶದಿಂದ ಶ್ರೀನಿವಾಸ ವಿಶ್ವವಿದ್ಯಾಲಯದ ಪಾಂಡೇಶ್ವರ ಸಿಟಿ ಕ್ಯಾಂಪಸ್ನಲ್ಲಿ ‘ಆಟಿಡೊಂಜಿ ದಿನ – ತುಳುನಾಡಿನ ಸಂಭ್ರಮ’ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಜುಲೈ 25ರಂದು ಆಚರಿಸಲಾಯಿತು.





ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀನಿವಾಸ ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ಡಾ. ಎ. ಶ್ರೀನಿವಾಸ ರಾವ್ ವಹಿಸಿದ್ದರು. ಅಧ್ಯಕ್ಷೀಯ ಭಾಷಣದಲ್ಲಿ ಮಾತನಾಡಿದ ಡಾ. ಎ. ಶ್ರೀನಿವಾಸ ರಾವ್, "ತುಳು ಭಾಷೆ ಅತಿ ಮಧುರವಾದ ಭಾಷೆ. ಕೇಳಲು ಚಂದ, ಮಾತನಾಡಲು ಚಂದ. ತುಳು ಭಾಷೆಯ ಮಹತ್ವವನ್ನು ಎಲ್ಲರಿಗೂ ತಿಳಿಸುವ ಉದ್ದೇಶದಿಂದ ಈ ಬಾರಿ ಆಟಿಡೊಂಜಿ ದಿನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ" ಎಂದು ಹೇಳಿದರು.
ಈ ಆಚರಣೆಯ ಮೂಲಕ ಆಟಿ ತಿಂಗಳ ಮಹತ್ವ ಹಾಗೂ ಆಟಿ ತಿಂಗಳ ವಿಶೇಷ ತಿನಿಸುಗಳ ಮಹತ್ವವನ್ನು ಜನರಿಗೆ ಪರಿಚಯಿಸಲಾಗುತ್ತಿದೆ ಎಂದರು. ಆಟಿ ತಿಂಗಳ ಸಾಂಸ್ಕೃತಿಕ ಮಹತ್ವ ದೇಶದ ಜನತೆಗೆ ತಿಳಿಯಬೇಕು ಎಂಬುದು ನಮ್ಮ ಆಶಯ ಎಂದು ತಿಳಿಸಿದರು. ಕಳೆದ 12 ವರ್ಷಗಳಿಂದ ಶ್ರೀನಿವಾಸ ವಿಶ್ವವಿದ್ಯಾಲಯವು ಶ್ರೀಕೃಷ್ಣ ಜನ್ಮಾಷ್ಟಮಿಯ ಅಂಗವಾಗಿ ಹುಲಿವೇಷ ಕಾರ್ಯಕ್ರಮವನ್ನು ಆಯೋಜಿಸುವ ಮೂಲಕ ನಮ್ಮ ಸಂಸ್ಕೃತಿ ಮತ್ತು ಪರಂಪರೆಯನ್ನು ಜನರಿಗೆ ಪರಿಚಯಿಸುವ ಪ್ರಯತ್ನ ಮಾಡುತ್ತಿದೆ ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಮಾತನಾಡಿ, ಆಟಿಡೊಂಜಿ ದಿನ ಕಾರ್ಯಕ್ರಮವು ಹಿಂದಿನ ಕಾಲದ ಜೀವನ ಪದ್ಧತಿ, ಸಂಸ್ಕೃತಿ ಹಾಗೂ ಸಂಪ್ರದಾಯಗಳನ್ನು ಇಂದಿನ ಮಕ್ಕಳಿಗೆ ಪರಿಚಯಿಸುವ ಉತ್ತಮ ಕಾರ್ಯವಾಗಿದೆ ಎಂದು ಶ್ಲಾಘಿಸಿದರು.
ವಿದ್ಯಾರ್ಥಿಗಳಿಗೆ ಕೃಷಿ ಪದ್ಧತಿ ಹಾಗೂ ಬೇಸಾಯದ ಮಹತ್ವವನ್ನು ತಿಳಿಸಬೇಕು. ತುಳು ಭಾಷೆಯೇ ಒಂದು ಸಂಸ್ಕೃತಿ. ಶ್ರೀನಿವಾಸ ವಿಶ್ವವಿದ್ಯಾಲಯದಂತಹ ಶಿಕ್ಷಣ ಸಂಸ್ಥೆಗಳ ಮೂಲಕ ತುಳುನಾಡಿನ ಜ್ಞಾನ, ಪರಂಪರೆ ಮತ್ತು ಸಂಸ್ಕೃತಿಯನ್ನು ವಿದ್ಯಾರ್ಥಿಗಳಿಗೆ ತಲುಪಿಸುವ ಕಾರ್ಯ ನಿರಂತರವಾಗಿ ನಡೆಯಲಿ ಎಂದು ಶುಭ ಹಾರೈಸಿದರು.
ಶ್ರೀನಿವಾಸ ವಿಶ್ವವಿದ್ಯಾಲಯದ ವಿಶ್ವಸ್ತ ಮಂಡಳಿ ಸದಸ್ಯೆ ಶ್ರೀಮತಿ ವಿಜಯಲಕ್ಷ್ಮೀ ಆರ್. ರಾವ್ ಮಾತನಾಡಿ, ಕಾರ್ಯಕ್ರಮದಲ್ಲಿ ಏರ್ಪಡಿಸಿದ್ದ ತುಳುನಾಡಿನ ಪಾರಂಪರಿಕ ವಸ್ತುಗಳ ಪ್ರದರ್ಶನವು ತಮ್ಮ ಅಜ್ಜನ ಮನೆಯ ನೆನಪುಗಳನ್ನು ಮರುಕಳಿಸಿತು ಎಂದು ಸಂತಸ ವ್ಯಕ್ತಪಡಿಸಿದರು.
ಶ್ರೀನಿವಾಸ ವಿಶ್ವವಿದ್ಯಾಲಯದ ವಿಶ್ವಸ್ತ ಮಂಡಳಿ ಸದಸ್ಯೆ ಪ್ರೊ. ಇರ್. ಶ್ರೀಮತಿ ಎ. ಮಿತ್ರಾ ಎಸ್. ರಾವ್ ಮಾತನಾಡಿ, ತಾವು ಮೂಲತಃ ಮಂಗಳೂರಿನವರಲ್ಲದಿದ್ದರೂ ವಿವಾಹದ ನಂತರ ಮಂಗಳೂರಿನ ಸಂಸ್ಕೃತಿಯನ್ನು ಸಂಪೂರ್ಣವಾಗಿ ಅಳವಡಿಸಿಕೊಂಡಿದ್ದೇನೆ. ಮಂಗಳೂರಿನ ಸಾಂಪ್ರದಾಯಿಕ ಆಹಾರ ನನಗೆ ಅತ್ಯಂತ ಇಷ್ಟ. ತುಳು ಭಾಷೆಯನ್ನು ಜನರು ಮಾತನಾಡುವುದನ್ನು ಕೇಳಿದಾಗ ಅದು ಸಂಗೀತದಂತೆ ಮಧುರವಾಗಿ ಕೇಳಿಸುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶ್ರೀನಿವಾಸ ವಿಶ್ವವಿದ್ಯಾಲಯದ ವಿಶ್ವಸ್ತ ಮಂಡಳಿ ಸದಸ್ಯೆಯರಾದ ಕುಮಾರಿ ಮೇಘನಾ ಎಸ್. ರಾವ್ ಹಾಗೂ ಕುಮಾರಿ ಸಮ್ನಾ ಎಸ್. ರಾವ್, ಅಭಿವೃದ್ಧಿ ರಿಜಿಸ್ಟ್ರಾರ್ ಡಾ. ಅಜಯ್ ಕುಮಾರ್, ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಅಂಡ್ ಕಾಮರ್ಸ್ನ ಡೀನ್ ಡಾ. ವೆಂಕಟೇಶ್ ಅಮೀನ್, ಇನ್ಸ್ಟಿಟ್ಯೂಟ್ ಆಫ್ ಫಿಸಿಯೋಥೆರಪಿಯ ಡೀನ್ ಡಾ. ತ್ರಿಶಾಲಾ ನೊರೊನ್ಹಾ, ಇನ್ಸ್ಟಿಟ್ಯೂಟ್ ಆಫ್ ಹೋಟೆಲ್ ಮ್ಯಾನೇಜ್ಮೆಂಟ್ ಅಂಡ್ ಟೂರಿಸಂನ ಡೀನ್ ಪ್ರೊ. ಬಿ. ಪ್ರಶಾಂತ್ ಪ್ರಭು, ಇನ್ಸ್ಟಿಟ್ಯೂಟ್ ಆಫ್ ಎಜುಕೇಶನ್ನ ಡೀನ್ ಡಾ. ಪದ್ಮನಾಭ ಸಿ. ಎಚ್., ಇನ್ಸ್ಟಿಟ್ಯೂಟ್ ಆಫ್ ಆಕ್ಯುಪೇಷನಲ್ ಥೆರಪಿಯ ಡೀನ್ ಡಾ. ಪ್ರಾಂಜಲಿ ಮಹಾತ್ರೆ ಸೇರಿದಂತೆ ವಿವಿಧ ವಿಭಾಗಗಳ ಡೀನ್ಗಳು, ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಪ್ರೊ. ಶಿಲ್ಪಾ ಪ್ರಾಸ್ತಾವಿಸಿದರು. ಪ್ರೊ. ಸುಷ್ಮಿತಾ ಎಸ್. ಕೋಟ್ಯಾನ್ ಸ್ವಾಗತಿಸಿದರು. ಡಾ. ಶಕೀಲಾ ವಂದನಾರ್ಪಣೆ ಸಲ್ಲಿಸಿದರು. ಪ್ರೊ. ಪ್ರಜ್ಞಾ ಒಡಿಲ್ನಾಳ ಹಾಗೂ ಪ್ರೊ. ರೇವತಿ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದ ಅಂಗವಾಗಿ ತುಳುನಾಡಿನ ಪಾರಂಪರಿಕ ಆಹಾರ, ಆಟಿ ತಿಂಗಳ ವಿಶೇಷ ತಿನಿಸುಗಳು, ಪ್ರಾಚೀನ ಗೃಹೋಪಯೋಗಿ ವಸ್ತುಗಳ ಪ್ರದರ್ಶನ, ಸಾಂಸ್ಕೃತಿಕ ಪ್ರದರ್ಶನಗಳು ಹಾಗೂ ಜನಪದ ಪರಂಪರೆಯನ್ನು ಪರಿಚಯಿಸುವ ವಿಶೇಷ ಮಳಿಗೆಗಳನ್ನು ಏರ್ಪಡಿಸಲಾಗಿದ್ದು, ವಿದ್ಯಾರ್ಥಿಗಳು ಹಾಗೂ ಅತಿಥಿಗಳು ತುಳುನಾಡಿನ ಸಂಸ್ಕೃತಿಯ ಸೊಬಗನ್ನು ಅನುಭವಿಸಿದರು.