ಉಡುಪಿ, ಜು. 26 (DaijiworldNews/AA): ಅಜೆಕಾರು ವಿಷ್ಣುಮೂರ್ತಿ ದೇವಸ್ಥಾನದ ಸಮೀಪದ ಉಗ್ರಾಣಿ ಬೆಟ್ಟು ನಿವಾಸಿ ಹಾಗೂ ಪ್ರಗತಿಪರ ಕೃಷಿಕ ಉಮೇಶ್ ಶೆಟ್ಟಿ (36) ಅವರು ಜುಲೈ 25ರಂದು ಹೃದಯಾಘಾತದಿಂದ ನಿಧನರಾದರು.

ಮನೆಯಲ್ಲಿ ಇದ್ದ ವೇಳೆ ಅವರಿಗೆ ಏಕಾಏಕಿ ಅಸ್ವಸ್ಥರಾಗಿದ್ದು, ಕೂಡಲೇ ಅಜೆಕಾರಿನ ಖಾಸಗಿ ಕ್ಲಿನಿಕ್ಗೆ ಕರೆದೊಯ್ಯಲಾಯಿತು. ಆದರೆ ಪರೀಕ್ಷಿಸಿದ ವೈದ್ಯರು ಅವರು ಆಸ್ಪತ್ರೆಗೆ ತಲುಪುವ ಮೊದಲೇ ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ.
ಪ್ರಗತಿಪರ ರೈತರಾಗಿ ಗುರುತಿಸಿಕೊಂಡಿದ್ದ ಉಮೇಶ್ ಶೆಟ್ಟಿ ಅವರು, ಧಾರ್ಮಿಕ ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲಿಯೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಅವರು ಅಜೆಕಾರು ಶ್ರೀ ಶಾರದಾ ಮಹೋತ್ಸವ ಸಮಿತಿಯ ಉಪಸಮಿತಿ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದು, ಮುಂಬರುವ ಶಾರದೋತ್ಸವ ಕಾರ್ಯಕ್ರಮದ ಸಿದ್ಧತೆಗಳಲ್ಲಿ ಪ್ರಮುಖ ಪಾತ್ರವಹಿಸಿದ್ದರು.
ಅವಿವಾಹಿತರಾಗಿದ್ದ ಉಮೇಶ್ ಶೆಟ್ಟಿ ಅವರು ತಾಯಿ, ಇಬ್ಬರು ಸಹೋದರರು, ಇಬ್ಬರು ಸಹೋದರಿಯರು ಹಾಗೂ ಅಪಾರ ಬಂಧು-ಬಳಗ ಮತ್ತು ಸ್ನೇಹಿತರನ್ನು ಅಗಲಿದ್ದಾರೆ.