ಪುತ್ತೂರು, ಜು. 26 (DaijiworldNews/AA): ಕಳೆದ ಎರಡು ದಿನಗಳಿಂದ ನಾಪತ್ತೆಯಾಗಿದ್ದ ನಿವೃತ್ತ ಗ್ರಂಥಪಾಲಕಿಯೊಬ್ಬರ ಮೃತದೇಹ ಶನಿವಾರ ಬಂಟ್ವಾಳ ತಾಲೂಕಿನ ಶಂಭೂರು ಸಮೀಪ ನೇತ್ರಾವತಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಅಣೆಕಟ್ಟಿನಲ್ಲಿ ಪತ್ತೆಯಾಗಿದೆ. ಅವರು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತರನ್ನು ಪುತ್ತೂರು ತಾಲೂಕಿನ ಪಡ್ನೂರು ಗ್ರಾಮದ ಅಜೇಯನಗರದ 'ಕಲಾತ್ಮಿಕ ಮನೆ' ನಿವಾಸಿ, ರಾಮ ಭಟ್ ಅವರ ಪತ್ನಿ ವಿಜಯಾ ಟಿ. (60) ಎಂದು ಗುರುತಿಸಲಾಗಿದೆ. ಅವರು ಪುತ್ತೂರಿನ ವಿವೇಕಾನಂದ ಪದವಿ ಕಾಲೇಜಿನಲ್ಲಿ ಗ್ರಂಥಪಾಲಕಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು.
ವಿಜಯಾ ಅವರು ಗುರುವಾರ ಬೆಳಗ್ಗೆ ಪುತ್ತೂರು ಪಟ್ಟಣಕ್ಕೆ ಹೋಗುವುದಾಗಿ ತಿಳಿಸಿ ಮನೆಯಿಂದ ಹೊರಟಿದ್ದರು. ಬಳಿಕ ಅವರು ಮನೆಗೆ ಮರಳದ ಹಿನ್ನೆಲೆಯಲ್ಲಿ ಕುಟುಂಬದವರು ಎಲ್ಲೆಡೆ ಹುಡುಕಾಟ ನಡೆಸಿದ್ದರು. ಯಾವುದೇ ಸುಳಿವು ಸಿಗದ ಕಾರಣ ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಲಾಗಿತ್ತು ಎಂದು ಕುಟುಂಬದವರು ಮಾಹಿತಿ ನೀಡಿದ್ದಾರೆ.
ಶನಿವಾರ ಬಂಟ್ವಾಳ ತಾಲೂಕಿನ ನೇತ್ರಾವತಿ ನದಿಯ ಶಂಭೂರು ಅಣೆಕಟ್ಟಿನಲ್ಲಿ ಅವರ ಮೃತದೇಹ ಸಿಲುಕಿರುವುದು ಪತ್ತೆಯಾಗಿ, ಬಳಿಕ ಪೊಲೀಸರು ಅದನ್ನು ಮೇಲಕ್ಕೆತ್ತಿದರು.
ಪ್ರಾಥಮಿಕ ತನಿಖೆಯ ಪ್ರಕಾರ ವಿಜಯಾ ಅವರು ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಇದೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಆದರೆ ಅವರ ಸಾವಿಗೆ ನಿಖರ ಕಾರಣವೇನು ಎಂಬುದರ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.