ಮಂಗಳೂರು, ಜು. 26 (DaijiworldNews/AA): ಕುಲಶೇಖರ ಜ್ಯೋತಿನಗರದ ಧರ್ಮಶಾಸ್ತ ಮಂದಿರ ಟ್ರಸ್ಟ್(ರಿ) ವತಿಯಿಂದ 13ನೇ ವರ್ಷದ ಆಟಿದೊಂಜಿ ಅಯ್ತಾರ ಕಾರ್ಯಕ್ರಮ ತುಳು ಪರಂಪರೆಯಂತೆ ಜರುಗಿತು.










ಈ ಕಾರ್ಯಕ್ರಮವನ್ನು V4 ನ್ಯೂಸ್ ಚಾನಲ್ನ ಆಡಳಿತ ನಿರ್ದೇಶಕರಾದ ಲಕ್ಷ್ಮಣ್ ಕುಂದರ್ ಮತ್ತು ಅವರ ಧರ್ಮಪತ್ನಿ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಖ್ಯಾತ ವಾಗ್ಮಿ, ಲೇಖಕ ಹಾಗೂ ತುಳು ಸಂಶೋಧಕರಾದ ಡಾ. ಅರುಣ್ ಉಳ್ಳಾಲ ಅವರು, ನಮ್ಮ ಹಿರಿಯರು ಬದುಕನ್ನು ಕಟ್ಟಿಕೊಂಡ ರೀತಿ ಮತ್ತು ಅದನ್ನು ಈಗಿನ ಜನಾಂಗ ಮರೆಯಬಾರದು ಎಂಬ ದೃಷ್ಟಿಕೋನದಲ್ಲಿ ಆಟಿದೊಂಜಿ ಅಯ್ತಾರ ಕಾರ್ಯಕ್ರಮ ಔಚಿತ್ಯಪೂರ್ಣವಾಗಿದೆ. ಧಾರ್ಮಿಕ ಕೇಂದ್ರದಲ್ಲಿ ಸಾಮಾಜಿಕ ಸಹಬಾಳ್ವೆಯಿಂದ ಶ್ರೀ ಧರ್ಮಶಾಸ್ತ ಮಂದಿರ ಟ್ರಸ್ಟ್ ಆದಶ್ ಹಾಗೂ ಅನುಕರಣೀಯವಾಗಿದೆ ಎಂದು ಹೇಳಿದರು.
ಬಳಿಕ ಮಾತನಾಡಿದ ದಾಯ್ಜಿವರ್ಲ್ಡ್ ಸಮೂಹ ಮಾಧ್ಯಮಗಳ ಮಾರ್ಕೆಟಿಂಗ್ ಮ್ಯಾನೇಜರ್ ಪ್ರವೀಣ್ ತಾವ್ರೋ ಅವರು, ಶ್ರೀ ಧರ್ಮಶಾಸ್ತ ಮಂದಿರ ಟ್ರಸ್ಟ್ ಎಲ್ಲರನ್ನು ಸಮಾನವಾಗಿ ಹಾಗೂ ಪ್ರೀತಿಯಿಂದ ಕಾಣುತ್ತಾ ಇಡೀ ಸಮಾಜವನ್ನು ಒಗ್ಗಟ್ಟಿನಲ್ಲಿ ಕೊಂಡೊಯ್ಯುವುದು ಸ್ತುತ್ಯರ್ಹವಾಗಿರುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಧರ್ಮಶಾಸ್ತ ಮಂದಿರ ಟ್ರಸ್ಟ್ (ರಿ) ಇದರ ಅಧ್ಯಕ್ಷರಾದ ನ್ಯಾಯವಾದಿ ರಾಮ್ ಪ್ರಸಾದ್ ಎಸ್ ವಹಿಸಿದ್ದರು. ಆಟಿದೊಂಜಿ ಅಯ್ತಾರ ಕಾರ್ಯಕ್ರಮ ಮಾಡುವ ಮೂಲಕ ನಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಮೂಲಕ ಮುಂದಿನ ಪೀಳಿಗೆಗೆ ತಿಳಿಸುವ ಪ್ರಯತ್ನವನ್ನು ಕಳೆದ 13 ವರ್ಷಗಳಿಂದ ಮಾಡಲಾಗುತ್ತಿದೆ. ಇದರಿಂದಾಗಿ ಸಾಮರಸ್ಯದ ಸಹೋದರತೆಯ ಜೀವನ ಸಾಧ್ಯವೆಂದರು.
ತುಳು ಅಕಾಡೆಮಿಯ ಮಾಜಿ ಅಧ್ಯಕ್ಷ, ಮಂದಿರದ ಟ್ರಸ್ಟಿ ದಯಾನಂದ ಕತ್ತಲ್ಸಾರ್ ಅವರ ಮಾರ್ಗದರ್ಶನದಲ್ಲಿ ಈ ಕಾರ್ಯಕ್ರಮ ರೂಪುಗೊಂಡಿದ್ದು, ಅವರು ಕಾರ್ಯಕ್ರಮ ನಿರೂಪಣೆ ಮಾಡಿದರು.
ವೇದಿಕರಯಲ್ಲಿ ಮಂದಿರದ ಟ್ರಸ್ಟಿ ಕೂಸಪ್ಪ, ಸೇವಾ ಸಮಿತಿ ಅಧ್ಯಕ್ಷ ಹರೀಶ್ ಜ್ಯೋತಿನಗರ, ಮಾತೃಮಂಡಳಿ ಅಧ್ಯಕ್ಷೆ ಕಮಲಾಕ್ಷಿ ಮೋಹನ್, ಟ್ರಸ್ಟ್ ಖಜಾಂಚಿ ಹರಿಣಿ ಪ್ರೇಮ್ ಉಪಸ್ಥಿತರಿದ್ದರು.
ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಮಾಲಿಂಗೇಶ್ವರ ಭಟ್ ಸ್ವಾಗತಿಸಿದರು. ಟ್ರಸ್ಟಿ ಅಶೋಕ್ ಜ್ಯೋತಿನಗರ ವಂದಿಸಿದರು.
ಮಕ್ಕಳ ಹಾಗೂ ಮಹಿಳೆಯರ ವಿಭಾಗದಿಂದ ತುಳು ಸಂಸ್ಕೃತಿ ಬಿಂಬಿಸುವ ನೃತ್ಯ ಹಾಗೂ ಸ್ಪರ್ಧೆಗಳು ಜರುಗಿತು. ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ ತುಳುನಾಡಿನ ಸುಮಾರು 33 ಸಾಂಪ್ರದಾಯಿಕ ತಿನಿಸುಗಳ ಪ್ರದರ್ಶನ ಮತ್ತು ಸವಿಯುವಿಕೆ ನಡೆಯಿತು. ಸಾರ್ವಜನಿಕರು ಆಟಿ ತಿಂಗಳಲ್ಲಿ ತಯಾರಿಸುವ ವಿವಿಧ ಸಾಂಪ್ರದಾಯಿಕ ಖಾದ್ಯಗಳನ್ನು ಆಸ್ವಾದಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.