ಉಡುಪಿ, ಸೆ 10 (Daijiworld News/RD): ಭಾರತದ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸುವ ಕೆಲಸವನ್ನು ಮೋದಿ ಸರಕಾರ ಮಾಡುತ್ತಿದೆ. ಈ ಸಂದರ್ಭದಲ್ಲಿ, ನರೇಂದ್ರ ಮೋದಿಯವರ ನಿಲುವನ್ನು ವಿರೋಧಿಸಿ ಜಿಲ್ಲಾಧಿಕಾರಿ ರಾಜೀನಾಮೆ ನೀಡಿದ್ದೀರಿ. ಮುಂದೆ ನೀವು ನೇಣು ಹಾಕಿಕೊಳ್ಳಬಹುದು ಎಂದು ಕಾರ್ಕಳ ಶಾಸಕ ಸುನೀಲ್ ಕುಮಾರ್ ಅವರು ಭಾಷಣ ಬಿಗಿಯುವ ಬರದಲ್ಲಿ ದ.ಕ. ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ರಾಜೀನಾಮೆ ನೀಡಿದ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಸೆ.10ರಂದು, ಉಡುಪಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, "ಭಾರತದ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸುವ ಕೆಲಸವನ್ನು ಮೋದಿ ಸರಕಾರ ಮಾಡುತ್ತಿದ್ದು, ಜಗತ್ತೇ ಭಾರತದ ಆಡಳಿತವನ್ನು ಒಪ್ಪಿಕೊಳ್ಳುತ್ತಿರುವ ಸಂದರ್ಭದಲ್ಲಿ, ಯಾವುದೋ ಜಿಲ್ಲಾಧಿಕಾರಿ ಇದನ್ನು ವಿರೋಧಿಸಿ ರಾಜೀನಾಮೆಯನ್ನು ಕೊಡುತ್ತಾರೆ. ರಾಜೀನಾಮೆ ಕೊಟ್ಟಂತಹ ಜಿಲ್ಲಾಧಿಕಾರಿ ಪತ್ರಿಕೆಗಳಿಗೆ ಕಾಶ್ಮೀರದ ವಿಷಯದ ಕುರಿತಂತೆ, ರಾಮ ಮಂದಿರದ ವಿಷಯದ ಕುರಿತಂತೆ ನನಗೆ ಸಮಾಧಾನ ಆಗಿಲ್ಲ ಎಂದು ಹೇಳುತ್ತಾರೆ. ನಾನು ಜಿಲ್ಲಾಧಿಕಾರಿಯವರನ್ನು ಮತ್ತು ಆ ರೀತಿಯ ಮಾನಸಿಕತೆ ಇರುವವರಿಗೆ ಹೇಳುವುದೇನೆಂದರೆ ಕೇವಲ 370ನೆ ವಿಧಿ ಅಲ್ಲ, ಪಿಒಕೆಗೆ ಪ್ರವೇಶ ಮಾಡುತ್ತೇವೆ. ಇವತ್ತು ಮೋದಿ ನಿಲುವನ್ನು ವಿರೋಧಿಸಿ ರಾಜೀನಾಮೆ ನೀಡಿದ್ದೀರಿ. ನೀವು ನೇಣು ಹಾಕಿಕೊಳ್ಳಬಹುದು ಅಂತಹ ನಿಲುವುಗಳನ್ನು ಕೇಂದ್ರ ಸರಕಾರ ಕೈಗೊಳ್ಳಲಿದೆ' ಎಂದು ಹೇಳಿದರು.