ಕುಂದಾಪುರ, ಸೆ 10 (DaijiworldNews/SM): ಕಳೆದ ಒಂದೂವರೆ ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ಜೋಡಿಯೊಂದು ಕುಟುಂಬ ಸದಸ್ಯರ ವಿರೋಧದ ನಡುವೆಯೂ ಇದೀಗ ಒಂದಾಗಿದ್ದು, ಸರಳ ಮದುವೆಯಾಗಿದ್ದಾರೆ.
ಸಾಗರದ ಸುಮಯ್ಯಬಾನು ಹಾಗೂ ರೆಹಮತ್ ಎಂಬುವರು ಒಂದೂವರೆ ವರ್ಷದಿಂದ ಪ್ರೀತಿಸುತ್ತಿದ್ದರು. ಆದರೆ ಯುವಕನ ಮನೆಯವರಿಗೆ ಇದು ಇಷ್ಟವಿರಲಿಲ್ಲ. ಇವರ ಪ್ರೀತಿಗೆ ಮನೆಯವರು ಅಡ್ಡಗಾಲಿಟ್ಟಿದ್ದರು. ಆದರೆ, ಇದಕ್ಕೆ ಎದೆಗುಂದದ ಯುವಕ ತನ್ನ ಪ್ರೇಯಸಿಯನ್ನು ಕುಂದಾಪುರಕ್ಕೆ ಕರೆತಂದಿದ್ದಾನೆ.
ಬಳಿಕ ಕುಂದಾಪುರದ ಮಹಿಳಾ ಸಾಂತ್ವಾನ ಕೇಂದ್ರಕ್ಕೆ ಆಗಮಿಸಿದ ಸುಮಯ್ಯ ದೂರು ನೀಡಿದ್ದರು. ಮಹಿಳಾ ಸಾಂತ್ವಾನ ಕೇಂದ್ರದ ಅಧ್ಯಕ್ಷೆ ರಾಧಾದಾಸ್ ಕುಂಭಾಶಿ ಯುವತಿಯ ತಾಯಿ, ಮಾವ ಹಾಗೂ ಮಸೀದಿಯ ಧರ್ಮಗುರುಗಳನ್ನು ಕುಂದಾಪುರಕ್ಕೆ ಕರೆಯಿಸಿಕೊಂಡು ಮಾತುಕತೆ ನಡೆಸಿದರು. ಬಳಿಕ ಪುರಸಭೆಯ ಸದಸ್ಯರಾದ ಮಹಮ್ಮದ್ ಅಬು ಅವರ ಸಹಭಾಗಿತ್ವದಲ್ಲಿ ಪ್ರೇಮಿಗಳು ವಿವಾಹವನ್ನು ನೆರವೇರಿಸಲಾಯಿತು. ಆ ಮೂಲಕ ಪರಸ್ಪರರನ್ನು ಪ್ರಾಣಕ್ಕಿಂತ ಹೆಚ್ಚು ಪ್ರೀತಿಸಿದ ಜೋಡಿಯೊಂದು ಪೋಷಕರ ವಿರೋಧವನ್ನು ಕಟ್ಟಿಕೊಂಡು ಮದುವೆಯಾಗುವ ಮೂಲಕ ಒಂದಾಗಿದ್ದಾರೆ