ಉಡುಪಿ, ಸೆ 11 (Daijiworld News/MSP): ಆಫ್ರಿಕಾ ಖಂಡದ ತಾಂಜಾನಿಯಾ ದೇಶದ ಬಾಬಟಿ ಬಳಿ ಆ.30ರಂದು ಸಂಭವಿಸಿದ ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯ ಗೊಂಡಿದ್ದ ಉದ್ಯಮಿ ಕುಂಜಿಬೆಟ್ಟು ಪಣಿಯಾಡಿ ಶ್ರವಣ್ ನಾಯಕ್ (39) ಎಂಬವರು ಚಿಕಿತ್ಸೆ ಫಲಕಾರಿಯಾಗದೆ ಸೆ.9ರಂದು ಸಂಜೆ ವೇಳೆ ಉಡುಪಿ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಇವರ ಸಹೋದರ ಸ್ವೀಕಾರ್ ನಾಯಕ್ ತಾಂಜಾನಿಯಾದಲ್ಲಿ ಉದ್ಯಮ ನಡೆಸುತ್ತಿದ್ದು, ಈ ಹಿನ್ನೆಲೆಯಲ್ಲಿ ಶ್ರವಣ್ ನಾಯಕ್ ತನ್ನ ಪತ್ನಿ ಜೊತೆ ಆಗಸ್ಟ್ ತಿಂಗಳಲ್ಲಿ ತಾಂಜಾನಿಯಾಕ್ಕೆ ತೆರಳಿದ್ದರು. ಆ. 30 ರಂದು ಅಲ್ಲಿ ಕಾರಿನಲ್ಲಿ ತನ್ನ ಪತ್ನಿ ಹಾಗೂ ಸಹೋದರ ಮತ್ತು ಸಹೋದರ ಪತ್ನಿ ಜೊತೆ ತೆರಳುತ್ತಿದ್ದಾಗ ಅವರಿದ್ದ ಕಾರಿಗೆ ಟ್ರಕ್ ಢಿಕ್ಕಿ ಹೊಡೆದಿತ್ತು. ಕಾರಿನಲ್ಲಿದ್ದ ಶ್ರವಣ್ ನಾಯಕ್ ಗಂಭೀರವಾಗಿ ಅವರ ಇತರರು ಸಣ್ಣಪುಟ್ಟ ಗಾಯಗೊಂಡಿದ್ದರು. ಶ್ರವಣ್ಗೆ ಅಲ್ಲಿನ ಸ್ಥಳೀಯ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಭಾರತಕ್ಕೆ ಕರೆದುಕೊಂಡು ಬರಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರೆಂದು ತಿಳಿದುಬಂದಿದೆ.
ಶ್ರವಣ್ ಅವರು ಬಿಜೆಪಿ ನಾಯಕರಾಗಿದ್ದ ಪೆರ್ಣಂಕಿಲ ಶಂಕರ ನಾಯಕ್ ಅವರ ಪುತ್ರ ಮತ್ತು ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಪೆರ್ಣಂಕಿಲ ಶ್ರೀಶ ನಾಯಕ್ ಅವರ ತಮ್ಮ. ಶ್ರವಣ್ ಅವರ ಅಣ್ಣ ಸ್ವೀಕಾರ್ ನಾಯಕ್ ತಾಂಜಾನಿಯದಲ್ಲಿ ಉಧ್ಯಮಿಯಾಗಿದ್ದರು. ಉಡುಪಿಯಲ್ಲಿ ಉದ್ಯಮಿಯಾಗಿರುವ ಮೃತರು ಪತ್ನಿ, ತಾಯಿ, ಇಬ್ಬರು ಸಹೋದರು ಮತ್ತು ಓರ್ವ ಸಹೋದರಿಯನ್ನು ಅಗಲಿದ್ದಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.