ಕಾರ್ಕಳ, ಸೆ 11 (Daijiworld News/MSP): ಎಲ್ಲಾ ಇಲಾಖೆಗಳ ಮಾಹಿತಿ,ಮಾರ್ಗಸೂಚಿಗಳು ಎಲ್ಲಾ ಇಲಾಖಾಧಿಕಾರಿಗಳಿಗೆ ತಿಳಿದಿರುವುದಿಲ್ಲ. ಪ್ರತಿಯೊಬ್ಬ ಇಲಾಖೆಯ ಮಾಹಿತಿಯ ಕುರಿತು ನಾಗರಿಕರಲ್ಲಿ ಅರಿವು ಮೂಡಿಸುವ ಸತ್ಕಾರ್ಯ ನಡೆಯಬೇಕು. 94 ಸಿಯಡಿಯಲ್ಲಿ ನಿವೇಶನ ಹಂಚಿಕೆ ಸಂಬಂಧಿಸಿದಂತೆ ಬಹಳಷ್ಟು ದೂರುಗಳು ಬಂದಿದೆ. ಡೀಮ್ಡ್ ಫಾರೆಸ್ಟ್ ಇದರ ವ್ಯಾಪ್ತಿಯಲ್ಲಿ ಬರುವುದರಿಂದ ಸಮಸ್ಸೆ ಜಂಟಿಲಗೊಂಡಿದೆ. ಈ ವಿಚಾರವು ಅರ್ಜಿದಾರರಿಗೂ ತಿಳಿದಿರುವುದಿಲ್ಲ. ಅಧಿಕಾರಿಗಳಲ್ಲಿ ತಾಳ್ಮೆ ಮುಖ್ಯ. ಅರ್ಜಿದಾರರು ಬಂದಾಗ ಅವರಲ್ಲಿ ಸಮಸ್ಸೆಗಳ ಕುರಿತು ಮನನ ಮಾಡುವುದು ಅಗತ್ಯ ಎಂದು ಕಾರ್ನಟಕ ಲೋಕಾಯುಕ್ತ ಉಡುಪಿ ಜಿಲ್ಲಾ ಡಿವೈಎಸ್ಪಿ ಎಂ.ಜಗದೀಶ್ ಅಭಿಪ್ರಾಯ ವ್ಯಕ್ತಪಡಿಸಿದರು.
ಕರ್ನಾಟಕ ಸರಕಾರ ಪೊಲೀಸ್ ಉಪಾಧೀಕ್ಷಕರು, ಕರ್ನಾಟಕ ಲೋಕಾಯುಕ್ತ ಉಡುಪಿ ವಿಭಾಗ ಹಾಗೂ ಕಾರ್ಕಳ ತಾಲೂಕು ಮಟ್ಟದ ಅಧಿಕಾರಿಗಳ ಕಾರ್ಕಳ ತಾಲೂಕು ಸಾರ್ವಜನಿಕ ಕುಂದುಕೊರತೆಗಳ ಅಹವಾಲು ಸ್ವೀಕಾರ ಮತ್ತು ವಿಚಾರಣೆಯ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ದೆಹಲಿಯಲ್ಲಿ ಕುಳಿತು ಕಾನೂನು ಮಾಡಿದರೆ ಹಳ್ಳಿಗೆ ಸರಿಹೋದಿತ್ತೇ?
ದೆಹಲಿಯಲ್ಲಿ ಕುಳಿತು ಕಾನೂನು ಮಾಡಿದರೆ ಹಳ್ಳಿಗೆ ಸರಿಹೋದಿತ್ತೇ? ಆಯಾಯ ಪ್ರದೇಶಕ್ಕೆ ಅನುಗುಣವಾಗಿ ಯೋಜನೆಗಳು ಮಾರ್ಪಡು ಮಾಡಬೇಕಾಗಿರುವುದು ಅಗತ್ಯವಾಗಿದೆ. ಜನಪ್ರತಿನಿಧಿಗಳು, ಅಧಿಕಾರಿಗಲು ನಾಗರಿಕರು ಸಮಾನ ಮನಸ್ಕರಾಗಿ ಕಾರ್ಯ ನಿರ್ವಹಿಸಿದಾಗ ದೇಶ ಪ್ರಗತಿಗೆ ಬುನಾದಿಯಾಗುತ್ತದೆ. ನಕ್ಸಲ್ ಪೀಡಿತ ನಾಡ್ಪಾಲು ಪ್ರದೇಶ ಇನ್ನು ಅಭಿವೃದ್ಧಿ ಕಂಡಿಲ್ಲ. ರಸ್ತೆ ಹೊಂಡಗುಂಡಿಗಳಿಂದ ಕೂಡಿದೆ. ಹೀಗಾಗಿ ಅಲ್ಲಿನ ಶಾಲೆಗಳಿಗೆ ಶಿಕ್ಷಕರು ಬರುವಲ್ಲಿ ಹಿಂದೇಟು ಹಾಕುತ್ತಿದ್ದಾರೆ. ಹೀಗಾದರೆ ವಿದ್ಯಾರ್ಥಿಗಳ ಭವಿಷ್ಯದ ಕುರಿತು ಚರ್ಚೆಯಾಗಬೇಕು ಎಂದು ಹಿರಿಯ ನಾಗರಿಕ ಸಂಜೀವ ಶೆಟ್ಟಿ ಸಭೆಯ ಮುಂದೆ ವಿಚಾರವನ್ನು ಪ್ರಸ್ತಾಪಿಸಿದರು.
ಉಳ್ಳವರಿಗೊಂದು, ಇಲ್ಲದವರಿಗೊಂದು ಕಾನೂನು!
ಕಾರ್ಕಳದಲ್ಲಿ ಉಳ್ಳವರಿಗೊಂದು ಕಾನೂನು. ಇಲ್ಲದವರಿಗೊಂದು ಕಾನೂನು ಚಾಲ್ತಿಯಲ್ಲಿದೆ. ಉಳ್ಳವನಿಗೆ ಬೇಕಾಬಿಟ್ಟಿ ನಿವೇಶನಗಳು ಹಂಚಿಕೆಯಾಗಿದೆ. ಇಲ್ಲದವನಿಗೆ ಒಂದಿಂಚು ಭೂಮಿ ಕೊಡುವಲ್ಲಿ ಕಂದಾಯ ಇಲಾಖೆ ಹಿಂದೆ ಮುಂದೆ ನೋಡುತ್ತಿದೆ. ತಾಲೂಕಿನ ಒಂದೇ ಕಡೆಯಲ್ಲಿ ಸುಮಾರು 15 - 20 ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿರುವುದರಿಂದ ಈ ಸಮಸ್ಸೆ ತಲೆದೋರಿರಲು ಕಾರಣವಾಗಿದೆ ಎಂದು ಮಾಹಿತಿಹಕ್ಕುದಾರ ದಾಖಲೆಯೊಂದಿಗೆ ಸಭೆಯಲ್ಲಿ ಮಂಡಿಸುತ್ತಿದ್ದಂತೆ ಅಧಿಕಾರಿ ವರ್ಗದವರು ಪೇಚಿಗೆ ಸಿಲುಕಿಕೊಂಡ ಘಟನೆಯು ನಡೆದಿತ್ತು.
16 ಅರ್ಜಿಗಳು ಸ್ವೀಕೃತ
ಅವಿಭಜಿತ ಕಾರ್ಕಳ ತಾಲೂಕು ವ್ಯಾಪ್ತಿಯಿಂದ ಒಟ್ಟು 16 ಅರ್ಜಿಗಳು ಲೋಕಾಯುಕ್ತ ವಿಭಾಗಕ್ಕೆ ಕೈಸೇರಿದವು. ಅವುಗಳಲ್ಲಿ ಬಹುತೇಕ 94ಸಿ ನಿವೇಶನ ಮಂಜೂರಾತಿಗೆ ಸಂಬಂಧಿಸಿದಾಗಿದೆ. ರಸ್ತೆ ದುರವಸ್ಥೆ, ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ಬಜಗೋಳಿಯಲ್ಲಿ ರಸ್ತೆ ವಿಭಜಕ ನಿರ್ಮಿಸಬೇಕು. ನಾಡ್ಪಾಲು ಸೇರಿದಂತೆ ಕುಗ್ರಾಮದಲ್ಲಿರುವ ಶಾಲೆಗಳನ್ನು ಉಳಿಸುವುದಕ್ಕೆ ಮುಂದಾಗಬೇಕು ಎಂಬ ಬೇಡಿಕೆಗಳು ದೂರಿನಲ್ಲಿ ಅಡಕವಾಗಿತ್ತು.
ತಹಶೀಲ್ದಾರ್ ಪುರಂದರ ಹೆಗ್ಡೆ, ಹೆಬ್ರಿ ತಹಶೀಲ್ದಾರ್ ಮಹೇಶ್ಚಂದ್ರ, ತಾಲೂಕು ಪಂಚಾಯತ್ ಇಓ ಡಾ.ಹರ್ಷ, ಮೊದಲಾದವರು ಉಪಸ್ಥಿತರಿಸದ್ದರು.ಲೋಕಾಯುಕ್ತ ಪೊಲೀಸ್ ನಿರೀಕ್ಷಕ ರಾಜಶೇಖರ. ಡಿ. ಸ್ವಾಗತಿಸಿದರು. ಲೋಕಾಯುಕ್ತ ಎಎಸೈ ನಾಗೇರ್ಶ ಉಡುಪ ನಿರೂಪಿಸಿದರು. ಲೋಕಾಯುಕ್ತ ನಿರೀಕ್ಷಕ ರವಿ ಬಿ.ಎಮ್ ಧನ್ಯವಾದ ವಿತ್ತರು.