ಬೈಂದೂರು, ಆ. 16 (DaijiworldNews/TA): ನಿರಂತರ ಮಳೆಯಿಂದಾಗಿ ಬೈಂದೂರು ತಾಲೂಕಿನ ನಾವುಂದ ಗ್ರಾಮದ ಅರೆಹೊಳೆಯಲ್ಲಿ ಬಡ ಕುಟುಂಬವೊಂದು ವಾಸಿಸುತ್ತಿದ್ದ ಮನೆ ಸಂಪೂರ್ಣವಾಗಿ ಕುಸಿದುಬಿದ್ದ ಘಟನೆ ನಡೆದಿದೆ. ಗುರುವಾರ ಮುಂಜಾನೆ ಸಂಭವಿಸಿದ ಈ ಅವಘಡದಲ್ಲಿ ಮನೆಯೊಳಗೆ ಮಲಗಿದ್ದ ದಂಪತಿ ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದಾರೆ.

ಸದಾಶಿವ ಗಾಣಿಗ ಅವರಿಗೆ ಸೇರಿದ ಮನೆ ಗುರುವಾರ ಬೆಳಗ್ಗೆ ಸುಮಾರು 5.30ರ ವೇಳೆಗೆ ಧಾರಾಕಾರ ಮಳೆಯಿಂದಾಗಿ ಇದ್ದಕ್ಕಿದ್ದಂತೆ ಕುಸಿದುಬಿದ್ದಿದೆ. ಘಟನೆಯ ವೇಳೆ ಸದಾಶಿವ ಗಾಣಿಗ ಹಾಗೂ ಅವರ ಪತ್ನಿ ಮನೆಯೊಳಗೆ ಮಲಗಿದ್ದರು. ಮನೆಯ ಗೋಡೆಗಳು ಹಾಗೂ ಛಾವಣಿ ಕುಸಿಯಲು ಆರಂಭಿಸಿದಾಗ ಭಾರೀ ಶಬ್ದ ಕೇಳಿ ಬೆಚ್ಚಿಬಿದ್ದ ದಂಪತಿ ತಕ್ಷಣ ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ. ಇದರಿಂದ ಯಾವುದೇ ಗಾಯಗಳಿಲ್ಲದೆ ದೊಡ್ಡ ದುರಂತದಿಂದ ಪಾರಾಗಿದ್ದಾರೆ. ಆದರೆ ಮನೆಯೊಳಗೆ ಸಂಗ್ರಹಿಸಿಟ್ಟಿದ್ದ ಗೃಹೋಪಯೋಗಿ ವಸ್ತುಗಳು ಹಾಗೂ ಆಹಾರ ಧಾನ್ಯಗಳು ಅವಶೇಷಗಳಡಿ ಸಂಪೂರ್ಣವಾಗಿ ಹೂತುಹೋಗಿವೆ.
ಸದಾಶಿವ ಗಾಣಿಗ ಅವರು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದು, ಆರೋಗ್ಯ ಸಮಸ್ಯೆಯಿಂದಾಗಿ ದಿನಗೂಲಿ ಕೆಲಸಕ್ಕೂ ತೆರಳಲು ಸಾಧ್ಯವಾಗುತ್ತಿಲ್ಲ ಎನ್ನಲಾಗಿದೆ. ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಪೋಷಿಸಲು ಈಗಾಗಲೇ ಸಂಕಷ್ಟದಲ್ಲಿದ್ದ ಕುಟುಂಬಕ್ಕೆ ಮನೆಯೂ ಕುಸಿದುಬಿದ್ದಿರುವುದು ಮತ್ತಷ್ಟು ಆರ್ಥಿಕ ಹೊರೆ ತಂದಿದೆ. ಮನೆ ಕಳೆದುಕೊಂಡಿರುವ ಕುಟುಂಬ ಸದ್ಯ ನಿರಾಶ್ರಿತವಾಗಿದ್ದು, ಸಣ್ಣ ಬಾಡಿಗೆ ಮನೆಯಲ್ಲಿ ಆಶ್ರಯ ಪಡೆದಿದೆ. ಘಟನೆಯ ಬಳಿಕ ಗ್ರಾಮ ಆಡಳಿತಾಧಿಕಾರಿ ಹಾಗೂ ಪಂಚಾಯತ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸರ್ಕಾರಿ ನಿಯಮಾವಳಿಗಳ ಪ್ರಕಾರ ಕುಟುಂಬಕ್ಕೆ ಗರಿಷ್ಠ ರೂ. 2.5 ಲಕ್ಷದವರೆಗೆ ತುರ್ತು ಪರಿಹಾರ ದೊರೆಯುವ ಸಾಧ್ಯತೆ ಇದೆ ಎನ್ನಲಾಗಿದೆ. ಆದರೆ ಬಸವ ವಸತಿ ಯೋಜನೆಯಡಿ ತಕ್ಷಣ ಹೊಸ ಮನೆ ನಿರ್ಮಿಸಿಕೊಳ್ಳಲು ಸಾಧ್ಯವಾಗದಿರುವುದು ಕುಟುಂಬದ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ. ಮನೆ ಕಳೆದುಕೊಂಡಿರುವ ಕುಟುಂಬಕ್ಕೆ ಶೀಘ್ರ ಪರಿಹಾರ ಹಾಗೂ ವಸತಿ ಸೌಲಭ್ಯ ಕಲ್ಪಿಸಬೇಕು ಎಂಬ ಒತ್ತಾಯ ಕೇಳಿಬಂದಿದೆ.