ಬಂಟ್ವಾಳ, ಸೆ 12 (Daijiworld News/MSP): ನೇತ್ರಾವತಿ ನದಿ ಪಾಲಾಗುತ್ತಿದ್ದ ವೃದ್ಧೆಯೊಬ್ಬರನ್ನು ಅಂಬಿಗರೊಬ್ಬರು ರಕ್ಷಿಸಿದ ಘಟನೆ ಸೆ.12 ರ ಗುರುವಾರ ನಡೆದಿದೆ. ವೃದ್ದೆಯನ್ನು ಕಡಬ ತಾಲೂಕಿನ ರಾಮಕುಂಜ ನಿವಾಸಿ 70 ವರ್ಷದ ಮಂಜಕ್ಕ ಎಂದು ಗುರುತಿಸಲಾಗಿದೆ.
ಗುರುವಾರ ಬೆಳಗ್ಗೆ ಎಂಟು ಗಂಟೆಯ ಸುಮಾರಿಗೆ ಸ್ಥಳೀಯ ನಿವಾಸಿಯಾಗಿರುವ ದೋಣಿಯ ಅಂಬಿಗ ಅಬ್ಬಾಸ್ ಎಂಬವರು, ದೋಣಿ ಪ್ರಯಾಣಿಕರಿಗಾಗಿ ಕಾಯುತ್ತಿದ್ದಾಗ ನೀರಿನಲ್ಲಿ ವಸ್ತುವೊಂದು ತೇಲಿ ಬರುತ್ತಿರುವಂತೆ ಭಾಸವಾಗಿ ತಕ್ಷಣ ದೋಣಿ ಮೂಲಕ ಮತ್ತೊಬ್ಬ ಸ್ಥಳೀಯ ನಿವಾಸಿ ಕೇಶವ ಎಂಬವರೊಂದಿಗೆ ದೋಣಿ ಮುಖಾಂತರ ನದಿ ಮಧ್ಯಭಾಗಕ್ಕೆ ಸಾಗಿದಾಗ ವೃದ್ದ ಮಹಿಳೆಯೊಬ್ಬರು ನೀರಿನಲ್ಲಿ ಮುಳುಗೇಳುತ್ತಿದ್ದರು.
ನೀರಿನ ಸೆಳೆತಕ್ಕೆ ಕೊಚ್ಚಿ ಹೋಗುತ್ತಿದ್ದವರನ್ನು ಅಂಬಿಗ ಅಬ್ಬಾಸ್ ಹಾಗೂ ಕೇಶವ ರಕ್ಷಿಸಿ ಉಪ್ಪಿನಂಗಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಂಜಕ್ಕ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಅಪಾಯದಿಂದ ಪಾರಾಗಿದ್ದಾರೆಂದು ತಿಳಿದು ಬಂದಿದೆ.
ಇದಕ್ಕೂ ಮುಂಚೆ ಮಹಿಳೆಯೊಬ್ಬರು ಬೆಳ್ಳಂಬೆಳಗ್ಗೆ ನದಿಗೆ ಹಾರಿದ್ದು ಉಪ್ಪಿನಂಗಡಿಯ ಸಹಸ್ರ ಲಿಂಗೇಶ್ವರ ಮಹಾಕಾಳಿ ದೇವಸ್ಥಾನದ ಬಳಿಯಿರುವ ನೇತ್ರಾವತಿ ಸಮುದಾಯ ಭವನದ ಸಮೀಪ ನದಿಯಲ್ಲಿ ಕೊಚ್ಚಿಕೊಂಡು ಹೋಗುವುದನ್ನು ಸಾರ್ವಜನಿಕರ ಗಮನಕ್ಕೆ ಬಂದಿದ್ದರೂ ಕೂಡಾ ರಕ್ಷಣೆ ಸಾಧ್ಯವಾಗಿರಲ್ಲಿಲ್ಲ. ಅವರೇ ಇವರು ಎಂದು ಹೇಳಲಾಗುತ್ತಿದ್ದು ಮಹಿಳೆಯನ್ನು ಕಡೇಶಿವಾಲಯದಲ್ಲಿ ರಕ್ಷಣೆ ಮಾಡಿದಾಗ ಅವರು ಕಡಬದ ರಾಮಕುಂಜ ನಿವಾಸಿ ಮಂಜಕ್ಕ ಎಂದು ತಿಳಿದುಬಂದಿದೆ. ಮಂಜಕ್ಕ ಆತ್ಮಹತ್ಯೆ ಮಾಡಿಕೊಳ್ಳಲೆಂದೇ ನದಿಗೆ ಹಾರಿರುರುವ ಸಂಶಯ ವ್ಯಕ್ತವಾಗುತ್ತಿದೆ. ಮಾಹಿತಿ ಪಡೆದ ಉಪ್ಪಿನಂಗಡಿ ಪೊಲೀಸರು ಬಂಟ್ವಾಳಕ್ಕೆ ಆಗಮಿಸಿ ಮಂಜಕ್ಕು ಅವರನ್ನು ಕರೆದುಕೊಂಡು ಹೋಗಿದ್ದಾರೆ ಎಂದು ತಿಳಿದುಬಂದಿದೆ.