ಬಂಟ್ವಾಳ, ಆ. 21 (DaijiworldNews/TA): ಬೆಳಗಿನ ಜಾವ ನಗರದ ರಸ್ತೆಗಳು ಇನ್ನೂ ನಿದ್ರೆಯಲ್ಲಿರುವಾಗಲೇ ಕೈಯಲ್ಲಿ ಪೊರಕೆ ಹಿಡಿದು ಸ್ವಚ್ಛತಾ ಕಾರ್ಯಕ್ಕೆ ಇಳಿಯುವ ಸೇಸಪ್ಪ ಅವರ ಬದುಕಿನ ಕಥೆ ಮಾತ್ರ ಅಸಾಮಾನ್ಯ. ಕೇವಲ ಮೂರನೇ ತರಗತಿಯವರೆಗೆ ವಿದ್ಯಾಭ್ಯಾಸ, ರೂ. 50 ದಿನಗೂಲಿಯಿಂದ ಆರಂಭವಾದ ಉದ್ಯೋಗ, ಬದುಕಿನ ಹಲವು ಸಂಕಷ್ಟಗಳು, ಕುಡಿತದ ಚಟ, ಇವೆಲ್ಲವನ್ನೂ ಮೆಟ್ಟಿ ನಿಂತು ಇಂದು ಸ್ವಂತ ಪರಿಶ್ರಮದಿಂದ ಬದುಕು ಕಟ್ಟಿಕೊಂಡಿರುವ ಸೇಸಪ್ಪ, ಪೌರ ಕಾರ್ಮಿಕರ ಶ್ರಮಕ್ಕೆ ಹೊಸ ಅರ್ಥ ನೀಡುವ ವ್ಯಕ್ತಿಯಾಗಿದ್ದಾರೆ.

1996ರಲ್ಲಿ ಕೇವಲ ರೂ. 50 ದಿನಗೂಲಿಗೆ ಕೆಲಸ ಆರಂಭಿಸಿದ ಸೇಸಪ್ಪ ಬಳಿಕ ಕಾಯಂ ನೌಕರರಾದರು. ಆರಂಭದ ದಿನಗಳಲ್ಲಿ ವೈಯಕ್ತಿಕ ಹಾಗೂ ಕೌಟುಂಬಿಕ ಕಾರಣಗಳಿಂದ ಕುಡಿತದ ಚಟಕ್ಕೆ ಒಳಗಾಗಿದ್ದರು. ಆದರೆ 2005ರ ಬಳಿಕ ಬದುಕನ್ನೇ ಬದಲಿಸಿಕೊಳ್ಳುವ ದೃಢ ನಿರ್ಧಾರ ಕೈಗೊಂಡರು. ಅಂದು ಎಸ್ಐ ಆಗಿದ್ದ ಬೆಳ್ಳಿಯಪ್ಪ ಅವರ ಸಲಹೆಗೆ ಬೆಲೆ ನೀಡಿ ಕುಡಿತವನ್ನು ಸಂಪೂರ್ಣವಾಗಿ ತ್ಯಜಿಸಿದರು. ಅಲ್ಲಿಂದ ಅವರ ಜೀವನದ ದಿಕ್ಕು ಬದಲಾಯಿತು.
ಇಂದಿಗೂ ಪ್ರತಿದಿನ ಬೆಳಗ್ಗೆ 5 ಗಂಟೆಗೆ ಬಿಸಿರೋಡಿಗೆ ಆಗಮಿಸುವ ಸೇಸಪ್ಪ, ಮಧ್ಯಾಹ್ನ 12 ಗಂಟೆಯವರೆಗೆ ನಗರದ ವಿವಿಧ ಭಾಗಗಳಲ್ಲಿ ಸ್ವಚ್ಛತಾ ಕಾರ್ಯದಲ್ಲಿ ತೊಡಗುತ್ತಾರೆ. ರಸ್ತೆಗಳ ಕಸ ಗುಡಿಸುವುದರಿಂದ ಹಿಡಿದು ಇಲಾಖೆಯಿಂದ ವಹಿಸಲಾಗುವ ವಿವಿಧ ಜವಾಬ್ದಾರಿಗಳವರೆಗೆ ಯಾವುದೇ ಕೆಲಸವನ್ನೂ ಅಲಕ್ಷಿಸದೆ ನಿರ್ವಹಿಸುತ್ತಾರೆ.
ಪೌರ ಕಾರ್ಮಿಕರಾಗಿ ನಗರದ ಸ್ವಚ್ಛತೆ ಕಾಪಾಡುವುದರ ಜೊತೆಗೆ ಕಚೇರಿಯ ತ್ಯಾಜ್ಯ ವಿಲೇವಾರಿ ವಾಹನದ ಚಾಲಕರಾಗಿಯೂ ಅವರು ಕರ್ತವ್ಯ ನಿರ್ವಹಿಸಿದ್ದಾರೆ. ಅಗತ್ಯವಿದ್ದಾಗ ಚಾಲನಾ ಜವಾಬ್ದಾರಿಯನ್ನೂ ವಹಿಸಿಕೊಳ್ಳುತ್ತಾರೆ. ಕೆಲಸ ಸಣ್ಣದು-ದೊಡ್ಡದು ಎಂಬ ಭೇದ ಮಾಡದೆ, ವಹಿಸಿದ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿಭಾಯಿಸುವುದು ಅವರ ವಿಶೇಷತೆ.
ಒಂದು ಕಾಲದಲ್ಲಿ ದೈವದ ಚಾಕಿರಿ ಮಾಡಿ ಜೀವನ ಸಾಗಿಸುತ್ತಿದ್ದ ಸೇಸಪ್ಪ, ಇಂದು ಸ್ವಂತ ಪರಿಶ್ರಮದಿಂದ ಆರ್ಥಿಕವಾಗಿ ಸದೃಢರಾಗಿದ್ದಾರೆ. ಇದೀಗ ಕೆಲಸಕ್ಕೆ ಪೋರ್ಚುನರ್ ಕಾರಿನಲ್ಲಿ ಆಗಮಿಸುವ ಅವರು, ತಮ್ಮ ಹಿಂದಿನ ದಿನಗಳನ್ನು ಮಾತ್ರ ಮರೆತಿಲ್ಲ. ಸ್ವಚ್ಛತಾ ಕೆಲಸದ ಜತೆಗೆ ಹೈನುಗಾರಿಕೆ ಮತ್ತು ಕೃಷಿಯಲ್ಲೂ ತೊಡಗಿಸಿಕೊಂಡಿದ್ದಾರೆ. ಮಧ್ಯಾಹ್ನದ ಬಳಿಕ ಕೂಲಿ ಕೆಲಸಕ್ಕೂ ತೆರಳುತ್ತಾರೆ. ದುಡಿಯಲು ಯಾವುದೇ ಹಿಂಜರಿಕೆ ಇರಬಾರದು, ಯಾವ ಕೆಲಸವನ್ನೂ ಕೀಳಾಗಿ ಕಾಣಬಾರದು ಎಂಬ ಮನೋಭಾವವೇ ತಮ್ಮ ಬದುಕಿನ ಯಶಸ್ಸಿನ ಗುಟ್ಟು ಎನ್ನುತ್ತಾರೆ.
ಪರವ ಸಮುದಾಯಕ್ಕೆ ಸೇರಿದ ಸೇಸಪ್ಪ ಅವರ ತಂದೆ ದೈವದ ನರ್ತಕರಾಗಿದ್ದರು. ಇದೀಗ ಅವರ ಮಗನೂ ತಂದೆಯ ಹಾದಿಯಲ್ಲಿ ದೈವದ ನರ್ತನ ಸೇವೆಯನ್ನು ಮುಂದುವರಿಸುತ್ತಿದ್ದಾರೆ. ಮನೆಯ ಅಂಗಳದಲ್ಲಿ ನೆಲೆಸಿರುವ ದೈವಗಳ ಮೇಲಿನ ನಂಬಿಕೆಯೇ ತಮ್ಮ ಬದುಕಿಗೆ ಶಕ್ತಿ ನೀಡುತ್ತಿದೆ ಎಂಬುದು ಸೇಸಪ್ಪ ಅವರ ನಂಬಿಕೆ. ಒಮ್ಮೆ ಅವರ ಹಟ್ಟಿಯಿಂದ ದನವೊಂದು ಕಳವಾಗಿತ್ತು. ಇದರಿಂದ ಬೇಸರಗೊಂಡ ಅವರು ದೈವದ ಗುಡಿಗೆ ಬೀಗ ಹಾಕಿ, ದನವನ್ನು ಮರಳಿ ಕೊಡಿಸುವಂತೆ ಪ್ರಾರ್ಥಿಸಿದ್ದರು. ಸುಮಾರು ಒಂದು ತಿಂಗಳ ಬಳಿಕ ದನ ಕದ್ದ ವ್ಯಕ್ತಿಯೇ ಅವರ ಮನೆಗೆ ಬಂದು ತಪ್ಪೊಪ್ಪಿಕೊಂಡ ಘಟನೆ ಇಂದಿಗೂ ಅವರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ.
ಸೇಸಪ್ಪ ಅವರ ಬದುಕಿನ ಅತ್ಯಂತ ಕಠಿಣ ಸಂದರ್ಭಗಳಲ್ಲಿ ತಂದೆಯ ನಿಧನದ ಘಟನೆಯೂ ಒಂದು. ತಂದೆಯ ಅಂತ್ಯಸಂಸ್ಕಾರ ನೆರವೇರಿಸಲು ಕೈಯಲ್ಲಿ ಹಣವಿರಲಿಲ್ಲ. ನೆರವಿಗೆ ಜನರೂ ಇರಲಿಲ್ಲ. ಕೊನೆಗೆ ತಂದೆಯ ಮೃತದೇಹವನ್ನು ತಾವೇ ಹೊತ್ತು ನೇತ್ರಾವತಿ ನದಿ ಬದಿಗೆ ಕೊಂಡೊಯ್ದು ಅಂತ್ಯಸಂಸ್ಕಾರ ನೆರವೇರಿಸಿದ ನೋವಿನ ಕ್ಷಣವನ್ನು ಅವರು ಇಂದಿಗೂ ನೆನಪಿಸಿಕೊಳ್ಳುತ್ತಾರೆ. “ಆ ದಿನ ಜೀವನದ ನಿಜವಾದ ಅರ್ಥ ನನಗೆ ತಿಳಿಯಿತು. ಯಾರಿದ್ದಾರೆ, ಯಾರಿಲ್ಲ ಎಂಬುದಕ್ಕಿಂತ ನಮ್ಮೊಳಗಿನ ಧೈರ್ಯವೇ ಮುಖ್ಯ” ಎನ್ನುವುದು ಅವರ ಬದುಕಿನ ಅನುಭವ.
ವರ್ಷಗಳ ಕಠಿಣ ಪರಿಶ್ರಮದ ನಡುವೆಯೂ ಇದುವರೆಗೆ ಯಾವುದೇ ಔಷಧಿ ಸೇವಿಸಿಲ್ಲ ಎನ್ನುವ ಸೇಸಪ್ಪ, ತಮ್ಮ ಆರೋಗ್ಯವನ್ನು ದೈವ ಕಾಪಾಡಿದೆ ಎಂಬ ನಂಬಿಕೆಯಲ್ಲಿದ್ದಾರೆ. ಬೆಳಗ್ಗಿನಿಂದ ಮಧ್ಯಾಹ್ನದವರೆಗೆ ಪೌರ ಕಾರ್ಮಿಕರಾಗಿ ಸ್ವಚ್ಛತಾ ಸೇವೆ, ಬಳಿಕ ಕೃಷಿ, ಹೈನುಗಾರಿಕೆ ಹಾಗೂ ಕೂಲಿ ಕೆಲಸ, ಹೀಗೆ ನಿರಂತರ ದುಡಿಯುವ ಜೀವನಶೈಲಿಯೇ ತಮ್ಮ ಶಕ್ತಿಯಾಗಿದೆ ಎನ್ನುತ್ತಾರೆ.
ಕೇವಲ ಮೂರನೇ ತರಗತಿಯ ವಿದ್ಯಾಭ್ಯಾಸ. ರೂ. 50 ದಿನಗೂಲಿಯಿಂದ ಆರಂಭವಾದ ಉದ್ಯೋಗ. ಬದುಕಿನ ಏರಿಳಿತಗಳ ನಡುವೆ ಎದುರಾದ ಕುಡಿತದ ಚಟ. ಬಳಿಕ ಅದನ್ನು ಸಂಪೂರ್ಣವಾಗಿ ತ್ಯಜಿಸಿ ಪರಿಶ್ರಮದ ಹಾದಿಯಲ್ಲಿ ಸಾಗಿದ ಜೀವನ. ಇಂದು ಸ್ವಂತ ಕಾರಿನಲ್ಲಿ ಕೆಲಸಕ್ಕೆ ಬರುವ ಸ್ಥಿತಿ. ಪೊರಕೆ ಹಿಡಿದ ಕೈಯಲ್ಲಿ ನಗರದ ಸ್ವಚ್ಛತೆಯಷ್ಟೇ ಅಲ್ಲ, ತಮ್ಮ ಬದುಕನ್ನೂ ಸ್ವಚ್ಛಗೊಳಿಸಿಕೊಂಡ ಸೇಸಪ್ಪ ಅವರ ಕಥೆ ಇದು.
ಅವರು ಕೇವಲ ಒಬ್ಬ ಪೌರ ಕಾರ್ಮಿಕರಲ್ಲ. ಕೆಲಸದ ಮೇಲಿನ ಬದ್ಧತೆ, ಸಮಯಪಾಲನೆ, ಪ್ರಾಮಾಣಿಕ ದುಡಿಮೆ, ಕಷ್ಟಗಳ ನಡುವೆಯೂ ಕುಗ್ಗದ ಮನೋಭಾವ ಮತ್ತು ದೈವದ ಮೇಲಿನ ನಂಬಿಕೆಯಿಂದ ಬದುಕನ್ನು ರೂಪಿಸಿಕೊಂಡಿರುವ ವ್ಯಕ್ತಿ. ವಿದ್ಯೆ ಕಡಿಮೆಯಾದರೂ ಬದುಕಿನ ಪಾಠ ದೊಡ್ಡದಾಗಿರಬಹುದು. ಪರಿಸ್ಥಿತಿ ಕಠಿಣವಾಗಿದ್ದರೂ ಪರಿಶ್ರಮಕ್ಕೆ ಸೋಲಿಲ್ಲ. ಪೊರಕೆಯಿಂದ ಆರಂಭವಾದ ಪಯಣ ಪೋರ್ಚುನರ್ ಕಾರಿನವರೆಗೆ ತಲುಪಿದ್ದರೂ, ಸೇಸಪ್ಪ ಅವರ ಕಾಲುಗಳು ಮಾತ್ರ ಇನ್ನೂ ಮಣ್ಣಿನ ಮೇಲೆಯೇ ಇವೆ. ಪೌರ ಕಾರ್ಮಿಕರ ಶ್ರಮಕ್ಕೆ ಗೌರವ ನೀಡಬೇಕೆಂಬ ಸಂದೇಶ ಸಾರುವ ಸೇಸಪ್ಪ ಅವರ ಬದುಕು, ಕಷ್ಟದಲ್ಲಿರುವ ಅನೇಕರಿಗೆ “ದುಡಿಮೆಗೆ ಎಂದಿಗೂ ಸೋಲಿಲ್ಲ” ಎಂಬ ಸ್ಪೂರ್ತಿಯ ಮಾತಾಗಿ ನಿಲ್ಲುತ್ತದೆ.