ಮಂಗಳೂರು, ಆ. 21 (DaijiworldNews/AA): ಕೊಂಕಣಿ ಮಾನ್ಯಾತಾ ದಿವಸ್ ಅನ್ನು ಮಂಗಳೂರಿನ ಶಕ್ತಿನಗರದಲ್ಲಿನ ವಿಶ್ವ ಕೊಂಕಣಿ ಕೇಂದ್ರದಲ್ಲಿ ಆಗಸ್ಟ್ 20 ರಂದು ಆಚರಿಸಲಾಯಿತು.
























ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದ ಮುಖ್ಯ ಅತಿಥಿ ಡಾ. ಟಿ.ಎಮ್.ಎ ಪೈ ಉತ್ಕಕೃಷ್ಟ ಕೊಂಕಣಿ ಪುಸ್ತಕ ಪುರಸ್ಕಾರ ವಿಜೇತ ಹಾಗೂ ಅಂಕಣಕಾರ ಗೋವಾದ ಅನಂತ ಅಗ್ನಿ ಅವರು, "ಭಾರತ ಸಂವಿಧಾನದ ೮ನೇಯ ಪರಿಛ್ಚೇದದಲ್ಲಿ ಸೇರಿಸಲು ಕೊಂಕಣಿ ಭಾಷೆಯು ಗೋವಾದ ರಾಜ್ಯಭಾಷೆ ಹಾಗೂ ಒಂದು ಸ್ವತಂತ್ರ ಭಾಷೆಯಾಗಿರುವುದೇ ಕಾರಣ. ಈ ಭಾಷೆಯ ಉನ್ನತೀಕರಣವು ಗೋವಾ, ಕರ್ನಾಟಕ, ಮಹಾರಾಷ್ಟ್ರ ಹಾಗೂ ಕೇರಳ ರಾಜ್ಯದಲ್ಲಿ ಕೊಂಕಣಿಯ ಶಿಕ್ಷಣ ಹಾಗೂ ಸಾಹಿತ್ಯದ ಬೆಳವಣಿಗೆಯಲ್ಲೇ ಇರುವುದು ಕೇವಲ ಸಮಾರಂಭಗಳಲ್ಲ" ಎಂದು ಹೇಳಿದರು.
ಮೊದಲು ರಾಷ್ಟ್ರಧ್ವಜವನ್ನು ಅರಳಿಸಿ ಮಂಗಳೂರಿನ ಕೊಂಕಣಿ ವಾಚನ ಸತ್ರದ ಕಾರ್ಯಕರ್ತರು 'ಗೋಡಿ ಗೋಡಿ ಹೋಡಿ ಭಾಸ ಕೊಂಕಣಿ' ಎಂಬ ಅಭಿಮಾನ ಗೀತೆಯನ್ನು ಹಾಡಿ ನಂತರ ಅಶೋಕ ನಾಯಕ ವಿರಚಿತ 'ಕೊಂಕಣಿ ಅಂತರ್ಧ್ವನಿ' ಎಂಬ ಲಘು ನಾಟಕವನ್ನು ಪ್ರದರ್ಶಿಸಿದರು. ಸಂಸ್ಥೆಯ ಅಧ್ಯಕ್ಷರಾದ ಸಿ ಎ ನಂದಗೋಪಾಲ ಶೆಣೈಯವರು ಸ್ವಾಗತಿಸಿದರು.
ಕಾರ್ಯದರ್ಶಿ ಡಾ. ಕಸ್ತೂರಿ ಮೋಹನ್ ಪೈ ಅವರು, ವಿಶ್ವ ಕೊಂಕಣಿ ಕೇಂದ್ರದ ಪ್ರೋತ್ಸಾಹದಿಂದ ಸುಮಾರು 4,500 ವಿದ್ಯಾರ್ಥಿಗಳು ತೃತೀಯ ಭಾಷೆ ಕೊಂಕಣಿ ಕಲಿತಿದ್ದಾರೆ. ನೀವೂ ನಿಮ್ಮ ಶಾಲಾ ಆಡಳಿತ ಮಂಡಳಿ ಹಾಗೂ ಹೆತ್ತವರ ಮನ ಒಲಿಸಿ ನಿಮ್ಮ ಶಾಲೆಯಲ್ಲಿ ಕೊಂಕಣಿ ಕಲಿಸಲು ವಿನಂತಿಸಿ" ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ನವ ದೆಹಲಿಯ ಸಾಹಿತ್ಯ ಅಕಾಡೆಮಿಯ ಕೊಂಕಣಿ ಸಲಹಾಕಾರರಾದ ಮೆಲ್ವಿನ್ ರೊಡ್ರಿಗಸ್ ಅವರು "ಏನೂ ಕಲಿತರು ಕೊಂಕಣಿ ಮಕ್ಕಳು ಮಾತೃಭಾಷೆಯನ್ನು ಮರೆಯಬಾರದು" ಎಂದು ಸಂದೇಶ ನೀಡಿದರು.
ಕಾರ್ಕಳದ ಎಸ್.ವಿ.ಟಿ ಶಾಲೆಯ ಕೌಸಲ್ಯ ಎಂಬ ವಿದ್ಯಾರ್ಥಿನಿಗೆ ಎಸ್.ಎಸ್.ಎಲ್.ಸಿಯಲ್ಲಿ ಕೊಂಕಣಿ ಭಾಷೆಯಲ್ಲಿ 100 ಅಂಕಗಳನ್ನು ಪಡೆದುದಕ್ಕಾಗಿ 7,000 ರೂ. ದ ಶಿಷ್ಯವೇತನವನ್ನು ಉಷಾ ಮೋಹನ ಪೈಯವರು ನೀಡಿ ಸನ್ಮಾನಿಸಿದರು.
ವಿವಿಧ ಶಾಲೆಗಳಿಂದ ಆಗಮಿಸಿದ ನೂರು ವಿದ್ಯಾರ್ಥಿಗಳ ತಂಡಗಳು ಕೊಂಕಣಿಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸಿದರು. ಕೆನರಾ ಹೈಸ್ಕೂಲ್ ಡೊಂಗರಕೇರಿ 5,000 ರೂಪಾಯಿಯ ಮೊದಲ ಬಹುಮಾನ, ಶಾರದಾ ವಿದ್ಯಾಲಯ ಕೊಡಿಯಾಲಬೈಲಗೆ 3,000 ರೂಪಾಯಿಯ ದ್ವಿತೀಯ ಹಾಗೂ ಕೆನರಾ ಹೈಯರ್ ಪ್ರೈಮರಿ, ಊರ್ವ 2,000 ರೂಪಾಯಿಯ ತೃತೀಯ ಬಹುಮಾನ ನೀಡಲಾಯಿತು.
ಎಮ್.ಆರ್. ಕಾಮತ್ ಅವರು ಕಾರ್ಯಕ್ರಮದ ಸಂಚಾಲಕರಾಗಿದ್ದರು. ಉಪಾಧ್ಯಕ್ಷರುಗಳಾದ ವಿಲಿಯಮ್ ಡಿಸೋಜ, ರಮೇಶ ನಾಯಕ ಮೈರಾ, ವಿಶ್ವಸ್ಥರಾದ ಕುಡ್ಪಿ ಜಗದೀಶ ಶೆಣೈ, ವತಿಕಾ ಕಾಮತ್, ಪ್ರಶಾಂತ ಶೇಟ್, ರೈತಬಂಧು ಶಿವಶಂಕರ ನಾಯಕ್, ಸಾಹಿತಿ ಹೆಚ್ ಎಮ್ ಪೆರ್ನಾಲ ಹಾಗೂ ಇತರ ಕೊಂಕಣಿ ಅಭಿಮಾನಿಗಳು ಉಪಸ್ಥಿತರಿದ್ದರು.
ಹಿರಿಯ ಕಲಾಕಾರರುಗಳಾದ ರಾಮದಾಸ್ ಗುಲ್ವಾಡಿ, ಪ್ರಕಾಶ ಶೆಣೈ ಹಾಗೂ ಮುರಲೀಧರ ಕಾಮತರವರು ತೀರ್ಪುಗಾರರಾಗಿದ್ದರು. ಕಾರ್ಯಕ್ರಮದ ಆಂಶಿಕ ಪ್ರಾಯೋಜಕರಾದ ವಿಶ್ವಸ್ಥ ಗೋಕುಲನಾಥ ಪ್ರಭುರವರ ಶುಭಸಂದೇಶವನ್ನು ಓದಿ ಸಂಸ್ಥೆಯ ಖಜಾಂಚಿ ಬಿ.ಆರ್.ಭಟ್ಟ ಅವರು ಎಲ್ಲರಿಗೂ ಧನ್ಯವಾದ ಅರ್ಪಿಸಿದರು.