ಕುಂದಾಪುರ, ಸೆ 12 (Daijiworld News/MSP): ದೇಶ ಎದುರಿಸುತ್ತಿರುವ ಆರ್ಥಿಕ ಬಿಕ್ಕಟ್ಟು, ಬೆಲೆ ಏರಿಕೆ, ನಿರುದ್ಯೋಗ ಸಮಸ್ಯೆ ಹಾಗೂ ಉತ್ತರ ಕರ್ನಾಟಕದ ನೆರೆ ಸಂತ್ರಸ್ತರಿಗೆ ಸೂಕ್ತ ಪರಿಹಾರ ಹಾಗೂ ಪರಿಹಾರ ವಿಳಂಬ ವಿರೋಧಿಸಿ ರಾಜ್ಯ ಹಾಗೂ ಕೇಂದ್ರ ಸರಕಾರದ ವಿರುದ್ಧ ಬೈಂದೂರು ಬ್ಲಾಕ್ ಹಾಗೂ ಯುವ ಕಾಂಗ್ರೆಸ್ ವತಿಯಿಂದ ತಾಲೂಕು ಕಛೇರಿ ಮುಂಭಾಗ ಧರಣಿ ನಡೆಸಿ ಬೈಂದೂರು ತಹಶಿಲ್ದಾರರ ಮೂಲಕ ಮನವಿ ಸಲ್ಲಿಸಲಾಯಿತು.
ಈ ಸಂದರ್ಭ ಮಾತನಾಡಿದ ಬೈಂದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮದನಕುಮಾರ್, ದೇಶದಲ್ಲಿ ಅರಾಜಕತೆ ತಾಂಡವವಾಡುತ್ತಿದೆ. ಸ್ಥಿರ ಸರ್ಕಾರ ಮತ್ತು ಸಾಮಾಜಿಕ ನ್ಯಾಯ ಎತ್ತಿ ಹಿಡಿಯಬೇಕಾದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನೇತೃತ್ವ ವಹಿಸಿರುವ ಬಿಜೆಪಿ ಶಾಸಕರ ಖರೀದಿಯ ಮತ್ತು ವಿದೇಶ ಯಾತ್ರೆಯ ಗುಂಗಿನಲ್ಲಿಯೇ ದಿನ ಕಳೆಯುತ್ತಿದೆ. ಕರ್ನಾಟಕದ 22 ಜಿಲ್ಲೆಗಳಿಗೆ ಬಂದೆರಗಿದ ಭೀಕರ ನೆರೆ ಹಾವಳಿಯ ಬಗ್ಗೆ ಕವಡೆ ಕಾಸನ್ನೂ ನೀಡದೇ ತನ್ನ ಸರ್ವಾಧಿಕಾರ ಮೆರೆಯುತ್ತಿದೆ. ತಕ್ಷಣವೇ ನೆರ ಸಂತ್ರಸ್ಥ ರೈತರಿಗೆ 40 ಸಾವಿರ ಕೋಟಿ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿದರು.
ಬ್ಲಾಕ್ ಅಧ್ಯಕ್ಷರಾದ ಎಸ್.ಮದನ್ ಕುಮಾರ್, ಯುವ ಕಾಂಗ್ರೆಸ್ ಅಧ್ಯಕ್ಷರಾದ ಶೇಖರ್ ಪೂಜಾರಿ ಉಪ್ಪುಂದ, ಜಿಲ್ಲಾ ಪಂಚಾಯತ್ ಸದಸ್ಯೆ ಗೌರಿ ದೇವಾಡಿಗ, ತಾಲೂಕು ಪಂಚಾಯತ್ ಸದಸ್ಯರಾದ ಜಗಧೀಶ್ ದೇವಾಡಿಗ, ಪ್ರಮೀಳಾ ದೇವಾಡಿಗ, ಯಡ್ತರೆ ಪಂಚಾಯತ್ ಅಧ್ಯಕ್ಷೆ ಮುಕಾಂಬು ದೇವಾಡಿಗ, ಬ್ಲಾಕ್ ಪ್ರಧಾನ ಕಾರ್ಯದರ್ಶಿ ನಾಗರಾಜ ಗಾಣಿಗ, ಮೋಹನ್ ಪೂಜಾರಿ, ವಾಸುದೇವ ಪೂಜಾರಿ, ರಾಜ್ಯ ಹಿಂದುಳಿದ ವರ್ಗ ಕಾರ್ಯದರ್ಶಿ ಸುಬ್ರಹ್ಮಣ್ಯ ಪೂಜಾರಿ, ಗಣೇಶ ಪೂಜಾರಿ, ಕಾರ್ಮಿಕ ಘಟಕ ಅಧ್ಯಕ್ಷ ಮಂಜುನಾಥ ಪೂಜಾರಿ, ಮುಖಂಡರುಗಳಾದ ನರಸಿಂಹ ದೇವಾಡಿಗ, ಚಿಕ್ಕು ಪೂಜಾರಿ, ಸುರೇಶ ಹೋಬಳಿದಾರ್, ನಾರಾಯಣ ಖಾರ್ವಿ, ವಿನಾಯಕ್ ರಾವ್, ದೀಪಕ್ ನಾವುಂದ, ವೀರಭದ್ರ ಗಾಣಿಗ, ಮಾಣಿಕ್ಯ, ಉಮೇಶ ದೇವಾಡಿಗ, ಸುರೇಶ ಬೆಸ್ಕೂರು, ರಾಜೇಶ ಕಂಬದಕೋಣೆ, ನಾಗೇಶ ಖಾರ್ವಿ, ಹರೀಶ್ ಮರವಂತೆ ಸೇರಿದಂತೆ ಹಲವು ಕಾರ್ಯಕರ್ತರು ಹಾಜರಿದ್ದರು.