ಕಡಬ, ಸೆ 12 (DaijiworldNews/SM): ಅಪ್ರಾಪ್ತೆಯನ್ನು ಮದುವೆಯಾದ ಪರಿಣಾಮ ಆಕೆ ಗರ್ಭವತಿಯಾದ ಘಟನೆ ಕಡಬ ಠಾಣಾ ವ್ಯಾಪ್ತಿಯ ಕೊಂಬಾರು ಎಂಬಲ್ಲಿ ಗುರುವಾರದಂದು ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಅಪ್ರಾಪ್ತೆಯ ಪತಿ ಹಾಗೂ ಮತ್ತಿತರರ ವಿರುದ್ಧ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೊಂಬಾರು ಗ್ರಾಮದ ಕೊಲ್ಕಜೆ ನಿವಾಸಿ ಭುವನೇಶ್ವರ ಎಂಬಾತ ಸುಮಾರು ಐದು ತಿಂಗಳ ಹಿಂದೆ ಬಾಲಕಿಯೋರ್ವಳನ್ನು ಮದುವೆಯಾಗಿದ್ದು, ಇದೀಗ ಆಕೆ ಗರ್ಭಿಣಿಯಾಗಿದ್ದಾಳೆ. ತಪಾಸಣೆಗೆಂದು ಆಸ್ಪತ್ರೆಗೆ ತೆರಳಿದ ವೇಳೆ ಹದಿನೆಂಟು ವರ್ಷ ಪೂರ್ತಿಯಾಗದ ಬಗ್ಗೆ ದಾಖಲಾತಿಯಲ್ಲಿ ಕಂಡುಬಂದಿದೆ.
ಈ ಬಗ್ಗೆ ವೈದ್ಯರು ಶಿಶು ಅಭಿವೃದ್ಧಿ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಅಲ್ಲದೆ ಕೊಂಬಾರು ಗ್ರಾಮದ ಮಹಿಳಾ ಮತ್ತು ಮಕ್ಕಳ ರಕ್ಷಣಾ ಕಾವಲು ಸಮಿತಿಯ ಅಧ್ಯಕ್ಷೆ, ಬಾಲಕಿಯ ಪತಿ ಭುವನೇಶ್ವರ ಹಾಗೂ ಮತ್ತಿತರರ ವಿರುದ್ಧ ಕಡಬ ಠಾಣೆಗೆ ದೂರು ನೀಡಿದ್ದಾರೆ.
ಅದರಂತೆ ಪ್ರಕರಣ ದಾಖಲಿಸಿಕೊಂಡಿರುವ ಕಡಬ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.