ಕಡಬ, ಸೆ. 06 (DaijiworldNews/TA): ಚಲಿಸುತ್ತಿದ್ದ ಕೆಎಸ್ಆರ್ಟಿಸಿ ಬಸ್ಗೆ ಹಠಾತ್ತನೆ ಬೆಂಕಿ ಹೊತ್ತಿಕೊಂಡು ಸಂಪೂರ್ಣವಾಗಿ ಸುಟ್ಟುಹೋದ ಘಟನೆ ಶನಿವಾರ ತಡರಾತ್ರಿ ಕಡಬ ತಾಲೂಕಿನ ಬಿಲಿನೆಲೆ ಗ್ರಾಮದ ಕೈಕಂಬ-ಗುಂಡ್ಯ ರಸ್ತೆಯ ಎರುಮೈಲ್ ಬಳಿ ನಡೆದಿದೆ. ಚಾಲಕನ ಸಮಯಪ್ರಜ್ಞೆಯಿಂದ ಬಸ್ನಲ್ಲಿದ್ದ 37 ಪ್ರಯಾಣಿಕರು ಕೂದಲೆಳೆಯ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದಾರೆ.

ಕೆಎಸ್ಆರ್ಟಿಸಿ ಬಸ್ ಸುಬ್ರಹ್ಮಣ್ಯದಿಂದ ಬೆಂಗಳೂರಿನತ್ತ ತೆರಳುತ್ತಿತ್ತು. ಎರುಮೈಲ್ ಬಳಿ ತಲುಪುತ್ತಿದ್ದಂತೆ ಬಸ್ನಿಂದ ದಟ್ಟ ಹೊಗೆ ಹಾಗೂ ಜ್ವಾಲೆಗಳು ಹೊರಹೊಮ್ಮುತ್ತಿರುವುದನ್ನು ಚಾಲಕ ಗಮನಿಸಿದ್ದಾರೆ. ಅಪಾಯದ ಮುನ್ಸೂಚನೆ ಅರಿತ ಚಾಲಕ ಕೂಡಲೇ ಬಸ್ನ್ನು ರಸ್ತೆಯ ಬದಿಗೆ ನಿಲ್ಲಿಸಿ, ಎಲ್ಲಾ ಪ್ರಯಾಣಿಕರನ್ನು ತಕ್ಷಣ ಕೆಳಗಿಳಿಯುವಂತೆ ಎಚ್ಚರಿಸಿದ್ದಾರೆ. ಚಾಲಕನ ಸಮಯೋಚಿತ ನಿರ್ಧಾರದಿಂದಾಗಿ ಕೆಲವೇ ಕ್ಷಣಗಳಲ್ಲಿ ಎಲ್ಲ 37 ಪ್ರಯಾಣಿಕರು ಸುರಕ್ಷಿತವಾಗಿ ಬಸ್ನಿಂದ ಹೊರಬಂದಿದ್ದಾರೆ.
ಪ್ರಯಾಣಿಕರನ್ನು ಸುರಕ್ಷಿತವಾಗಿ ಸ್ಥಳಾಂತರಿಸಿದ ಕೆಲವೇ ಕ್ಷಣಗಳಲ್ಲಿ ಬೆಂಕಿ ಇಡೀ ಬಸ್ಗೆ ವ್ಯಾಪಿಸಿದೆ. ನೋಡನೋಡುತ್ತಿದ್ದಂತೆ ಬಸ್ ಸಂಪೂರ್ಣವಾಗಿ ಬೆಂಕಿಗಾಹುತಿಯಾಗಿ ಸುಟ್ಟು ಭಸ್ಮವಾಗಿದೆ. ಘಟನೆಯ ಮಾಹಿತಿ ಲಭ್ಯವಾಗುತ್ತಿದ್ದಂತೆ ಸ್ಥಳೀಯರು, ಬಸ್ ಸಿಬ್ಬಂದಿ ಹಾಗೂ ಪೊಲೀಸರಿಂದ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಯಿತು. ಕೂಡಲೇ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದರು. ಕಡಬ ಪೊಲೀಸರು ಕೂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪ್ರಾಥಮಿಕ ಮಾಹಿತಿಯ ಪ್ರಕಾರ ಬಸ್ನಲ್ಲಿ ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಕಾಣಿಸಿಕೊಂಡಿರುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿದೆ. ಆದರೆ ಬೆಂಕಿಗೆ ನಿಖರ ಕಾರಣ ಏನು ಎಂಬುದು ಪರಿಶೀಲನೆಯ ಬಳಿಕವಷ್ಟೇ ಖಚಿತವಾಗಲಿದೆ. ಚಾಲಕನ ಸಮಯಪ್ರಜ್ಞೆ ಹಾಗೂ ತಕ್ಷಣದ ನಿರ್ಧಾರದಿಂದಾಗಿ ಬಸ್ನಲ್ಲಿದ್ದ 37 ಪ್ರಯಾಣಿಕರು ಸುರಕ್ಷಿತವಾಗಿ ಪಾರಾಗಿದ್ದು, ಸಂಭವಿಸಬಹುದಾಗಿದ್ದ ಭಾರೀ ದುರಂತವೊಂದು ತಪ್ಪಿದಂತಾಗಿದೆ.