ಕಾಸರಗೋಡು, ಸೆ. 06 (DaijiworldNews/TA): ಹೊಸಂಗಡಿ ಅಂಗಡಿಪದವುನಲ್ಲಿ ಕರ್ನಾಟಕ ಮೂಲದ ವ್ಯಕ್ತಿಯೊಬ್ಬರನ್ನು ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಜೇಶ್ವರ ಪೊಲೀಸರು ಆರೋಪಿಯನ್ನು ಮಂಗಳೂರಿನಲ್ಲಿ ಬಂಧಿಸಿದ್ದಾರೆ. ಬಂಧಿತನನ್ನು ದಾವಣಗೆರೆ ಜಿಲ್ಲೆಯ ಹರಪನಹಳ್ಳಿ ನಿವಾಸಿ ರಾಮ್ ನಾಯಕ್ ಅಲಿಯಾಸ್ ರಮೇಶ್ (31) ಎಂದು ಗುರುತಿಸಲಾಗಿದೆ. ಮಂಜೇಶ್ವರ ಇನ್ಸ್ಪೆಕ್ಟರ್ ಎಂ.ವಿ. ವಿಷ್ಣು ಪ್ರಸಾದ್ ನೇತೃತ್ವದ ಪೊಲೀಸ್ ತಂಡ ಶನಿವಾರ ರಾತ್ರಿ ಮಂಗಳೂರಿನ ಪಡೀಲ್ನಲ್ಲಿ ಆರೋಪಿಯನ್ನು ವಶಕ್ಕೆ ಪಡೆದಿದೆ. ಕೃತ್ಯದ ಬಳಿಕ ಸ್ವಗ್ರಾಮಕ್ಕೆ ಪರಾರಿಯಾಗಲು ಯತ್ನಿಸುತ್ತಿದ್ದ ವೇಳೆ ಆರೋಪಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.

ಕೊಲೆಯಾದ ವ್ಯಕ್ತಿಯನ್ನು ರಮೇಶ್ (38) ಎಂದು ಗುರುತಿಸಲಾಗಿದೆ. ಉತ್ತರ ಕರ್ನಾಟಕದ ಹೊಸಪೇಟೆ ತಾಲೂಕಿನ ಲಿಂಗನಾಯಕನಹಳ್ಳಿ ಮೂಲದ ಅವರು ಅಂಗಡಿಪದವುನಲ್ಲಿ ವಾಸವಿದ್ದು, ದಿನಗೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ಶುಕ್ರವಾರ ಸಂಜೆ ಅವರು ವಾಸವಾಗಿದ್ದ ಹಳೆಯ ಎರಡು ಅಂತಸ್ತಿನ ಮನೆಯ ಅಡುಗೆಮನೆಯಲ್ಲಿ ಅವರ ಮೃತದೇಹ ಪತ್ತೆಯಾಗಿತ್ತು.
ಪೊಲೀಸರ ಪ್ರಕಾರ, ಮೃತ ರಮೇಶ್ ಹಾಗೂ ಆರೋಪಿ ರಾಮ್ ನಾಯಕ್ ಸ್ನೇಹಿತರಾಗಿದ್ದರು. ಘಟನೆ ನಡೆದ ದಿನ ಇಬ್ಬರೂ ಮನೆಯಲ್ಲಿ ಮದ್ಯ ಸೇವಿಸುತ್ತಿದ್ದ ವೇಳೆ ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ವಾಗ್ವಾದ ನಡೆದಿದೆ. ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿದ್ದು, ಕೋಪದ ಭರದಲ್ಲಿ ರಾಮ್ ನಾಯಕ್ ರಮೇಶ್ಗೆ ಇರಿದು ಕೊಲೆ ಮಾಡಿ ಸ್ಥಳದಿಂದ ಪರಾರಿಯಾಗಿದ್ದಾನೆ ಎನ್ನಲಾಗಿದೆ.
ರಮೇಶ್ ಅಡುಗೆಮನೆಯಲ್ಲಿ ಮೃತಪಟ್ಟಿರುವುದನ್ನು ಗಮನಿಸಿದ ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ಧಾವಿಸಿದ ಮಂಜೇಶ್ವರ ಪೊಲೀಸರು ತನಿಖೆ ಆರಂಭಿಸಿ, ಆರೋಪಿಯ ಪತ್ತೆಗೆ ಕಾರ್ಯಾಚರಣೆ ನಡೆಸಿದ್ದರು. ಅಪರಾಧದ ಬಳಿಕ ಮಂಗಳೂರಿನ ಮೂಲಕ ಸ್ವಗ್ರಾಮಕ್ಕೆ ತೆರಳಲು ಯತ್ನಿಸುತ್ತಿದ್ದ ಆರೋಪಿಯನ್ನು ಪಡೀಲ್ನಲ್ಲಿ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಬಳಿಕ ಮೃತದೇಹವನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಗಿದ್ದು, ಅಂತ್ಯಕ್ರಿಯೆಗಾಗಿ ಸ್ವಗ್ರಾಮಕ್ಕೆ ಕೊಂಡೊಯ್ಯಲಾಗಿದೆ. ಕಾರ್ಯಾಚರಣೆಯಲ್ಲಿ ಸಬ್ಇನ್ಸ್ಪೆಕ್ಟರ್ಗಳಾದ ಶಬರೀಕೃಷ್ಣನ್ ಮತ್ತು ಅರ್ಜುನ್, ಪೊಲೀಸ್ ಸ್ಕ್ವಾಡ್ ಸದಸ್ಯರಾದ ಸುಧಾಕರನ್, ಸಜಿತ್, ರಾಜೇಶ್ ಹಾಗೂ ಜಿನೇಶ್ ಸಹಕರಿಸಿದ್ದಾರೆ.