ಕಡಬ, ಸೆ. 06 (DaijiworldNews/AA): ದರೋಡೆ ಹಾಗೂ ಹನಿಟ್ರ್ಯಾಪ್ ಸೇರಿದಂತೆ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಕಳೆದ ಒಂದು ತಿಂಗಳಿನಿಂದ ತಲೆಮರೆಸಿಕೊಂಡಿದ್ದ ಬೆಳಗಾವಿಯ ಮೂವರು ಕುಖ್ಯಾತ ಆರೋಪಿಗಳನ್ನು ಕುಕ್ಕೆ ಸುಬ್ರಹ್ಮಣ್ಯ ಪೊಲೀಸರು ಸಿನಿಮೀಯ ರೀತಿಯ ಕಾರ್ಯಾಚರಣೆ ನಡೆಸಿ ಶುಕ್ರವಾರ ಬಂಧಿಸಿದ್ದಾರೆ.

ಬಂಧಿತ ಆರೋಪಿಗಳು ಬೆಳಗಾವಿ ಜಿಲ್ಲೆಯ ಹಾರೂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿರುವ ವಿವಿಧ ಅಪರಾಧ ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದರು. ಕೃತ್ಯಗಳ ಬಳಿಕ ಪೊಲೀಸರ ಕಣ್ಗಾವಲಿನಿಂದ ತಪ್ಪಿಸಿಕೊಂಡಿದ್ದ ಅವರು, ಕಳೆದ ಕೆಲ ದಿನಗಳಿಂದ ತಲೆಮರೆಸಿಕೊಂಡಿದ್ದರು.
ಇತ್ತೀಚೆಗೆ, ಮೂವರು ಆರೋಪಿಗಳು ಕುಕ್ಕೆ ಸುಬ್ರಹ್ಮಣ್ಯಕ್ಕೆ ಆಗಮಿಸಿರುವ ಬಗ್ಗೆ ಪೊಲೀಸರಿಗೆ ಖಚಿತ ಮಾಹಿತಿ ಲಭಿಸಿತ್ತು. ಮಾಹಿತಿ ದೊರೆತ ತಕ್ಷಣ ಕಾರ್ಯಪ್ರವೃತ್ತರಾದ ಸ್ಥಳೀಯ ಠಾಣಾಧಿಕಾರಿ ಹಾಗೂ ಪೊಲೀಸ್ ಸಿಬ್ಬಂದಿ ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ಆರಂಭಿಸಿದರು.
ಸ್ಥಳೀಯರು ಹಾಗೂ ಆಟೋರಿಕ್ಷಾ ಚಾಲಕರ ಸಕ್ರಿಯ ಸಹಕಾರದೊಂದಿಗೆ ಪೊಲೀಸರು ಕುಮಾರಧಾರಾ ನದಿ ಸಮೀಪ ರಸ್ತೆಯಲ್ಲಿ ಇತರೆ ವಾಹನಗಳನ್ನು ಅಡ್ಡವಾಗಿ ನಿಲ್ಲಿಸಿ ಬ್ಯಾರಿಕೇಡ್ ನಿರ್ಮಿಸಿದರು. ಬಳಿಕ ಆರೋಪಿಗಳು ಪ್ರಯಾಣಿಸುತ್ತಿದ್ದ ವಾಹನವನ್ನು ತಡೆದು, ಅದರಲ್ಲಿದ್ದ ಮೂವರನ್ನೂ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾದರು.
ಆರೋಪಿಗಳನ್ನು ವಶಕ್ಕೆ ಪಡೆಯಲು ಬೆಳಗಾವಿ ಪೊಲೀಸ್ ತಂಡವು ಸುಬ್ರಹ್ಮಣ್ಯಕ್ಕೆ ಆಗಮಿಸಿತ್ತು. ಹೆಚ್ಚಿನ ತನಿಖೆ ಹಾಗೂ ಕಾನೂನು ಕ್ರಮಗಳಿಗಾಗಿ ಆರೋಪಿಗಳನ್ನು ಬೆಳಗಾವಿಗೆ ಕರೆದೊಯ್ಯಲಾಯಿತು.