ಕಾರ್ಕಳ, ಸೆ 13 (Daijiworld News/MSP): ದೇವಸ್ಥಾನಗಳು ಕೇವಲ ಪೂಜಾ ಕೇಂದ್ರಕ್ಕೆ ಮಾತ್ರ ಸೀಮಿತವಾಗಬಾರದು. ಮಾನವತ್ವ, ಶಿಕ್ಷಣ, ಉದ್ಯೋಗ ಜೊತೆಗೆ ಸಾಮಾಜಿಕ ಪಿಡುಗಗಳನ್ನು ಹೋಗಲಾಡಿಸುವ ಶಕ್ತಿಕೇಂದ್ರವಾಗಿ ಮಾರ್ಪಡಾಗಬೇಕು. ಶಿಕ್ಷಣ ಪಡೆದು ಸ್ವಾತಂತ್ರ್ಯರಾದಾಗ ಜೀವನದಲ್ಲಿ ಯಶಸ್ಸು ದೊರೆಯುತ್ತದೆ. ಸರಳ ಜೀವನದಿಂದ ಬದುಕಿನಲ್ಲಿ ತೃಪ್ತಿ ಪ್ರಾಪ್ತಿಯಾಗುತ್ತದೆ ಇದು ನಾರಾಯಣ ಗುರುಗಳ ಚಿಂತನೆಯಾಗಿದೆ. ನಾರಾಯಣ ಗುರು ಓರ್ವ ಮಾನವತಾವಾದಿಯಾಗಿದ್ದು, ಅವರ ತತ್ವ,ಸಿದ್ಧಂತಾಗಳು ಸಾರ್ವಕಾಲಿಕ ಮತ್ತು ಅನುಕರಣೀಯ ಎಂದು ಕಾರ್ಕಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರಭಾಕರ ಶೆಟ್ಟಿ ಕೊಂಡಳ್ಳಿ ಹೇಳಿದ್ದಾರೆ.
ಅವರು ತಾ.ಪಂ.ಸಭಾಭವನದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ತಾಲೂಕು ಆಡಳಿತ ಕಾರ್ಕಳ ಇವರ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ ನಡೆದ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಆಚರಣೆಯಲ್ಲಿ ವಿಶೇಷ ಉಪಾನ್ಯಾಸ ನೆರವೇರಿಸಿ ಮಾತನಾಡಿದರು.
ಶಿಕ್ಷಣ ಪಡೆದು ಸ್ವತಂತ್ರರಾಗಿ. ಸಂಘಟಿತರಾಗಿ ಬಲಾಢ್ಯರಾಗುವ ಮೂಲಕ ಸಮಾಜದಲ್ಲಿರುವ ಅಂಧಕಾರ ಮತ್ತು ಶೋಷಣೆಯಿಂದ ಹೊರ ಬನ್ನಿ ಎಂದು ನಾರಾಯಣ ಗುರುಗಳು ಸಾರಿ ಹೇಳಿದರು. ಅವರು ಕೇವಲ ಒಂದು ಸಮುದಾಯದ ಗುರುವಾಗದೇ, ಶೋಷಿತ ವರ್ಗದ ಧ್ವನಿಯಾಗಿ ಸೇವೆ ಸಲ್ಲಿಸಿದರ ಪರಿಣಾಮ, ಮೇಲ್ವರ್ಗದ ಜನತೆ ಕೂಡಾ ನಾರಾಯಣಗುರುಗಳ ಶಿಷ್ಯರಾಗುವಂತೆ ಮಾಡಿರುವುದು ಅವರಲ್ಲಿರುವ ಸಮಾಜ ಸುಧಾರಣೆಯ ಪ್ರೇರಣೆ ಶಕ್ತಿ ಎಂದು ಹೇಳಿದರು.
ತಾ.ಪಂ.ಅಧ್ಯಕ್ಷೆ ಮಾಲಿನಿ ಜೆ.ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿ, ಅಧ್ಯಕ್ಷತೆ ವಹಿಸಿದ್ದರು. ಜಿ.ಪಂ.ಸ್ಥಾಯಿ ಸಮಿತಿ ಅಧ್ಯಕ್ಷ ಉದಯ ಎಸ್. ಕೋಟ್ಯಾನ್, ಜಿಲ್ಲಾ ಪಂಚಾಯತ್ ಸದಸ್ಯೆ ರೇಶ್ಮಾ ಶೆಟ್ಟಿ, ಬಿಲ್ಲವ ಯುವವಾಹಿನಿ ಅಧ್ಯಕ್ಷ ಸುಧಾಕರ ಪೂಜಾರಿ ಸಂದಭೋಚಿತವಾಗಿ ಮಾತನಾಡಿದರು. ತಹಸೀಲ್ದಾರ್ ಪುರಂದರ ಹೆಗ್ಡೆ ಸ್ವಾಗತಿಸಿ, ಪ್ರಸ್ತಾವಿಕವಾಗಿ ಮಾತನಾಡಿದರು. ತಾಲೂಕು ಪಂಚಾಯತ್ ಉಪಾಧ್ಯಕ್ಷ ಗೋಪಾಲಮೂಲ್ಯ, ಜಿಲ್ಲಾ ಪಂಚಾಯತ್ ಸದಸ್ಯೆ ದಿವ್ಯಾಶ್ರೀ ಅಮೀನ್, ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಡಾ.ಹರ್ಷ ಕೆ.ಬಿ, ಪುರಸಭೆಯ ಪ್ರಭಾಯ ಮುಖ್ಯಾಧಿಕಾರಿ ಮಂಜುನಾಥ ಕೆ.ಎಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ನಿವೇದಿತಾ ಪ್ರಾರ್ಥಿಸಿದರು. ಕಂದಾಯ ನಿರೀಕ್ಷಕ ಸುರೇಶ್ ರಾವ್ ನಿರೂಪಿಸಿದರು.