ಬಂಟ್ವಾಳ, ಸೆ. 06 (DaijiworldNews/TA): ಭವಿಷ್ಯದ ಭಾರತದ ನಿರ್ಮಾಣದಲ್ಲಿ ಶಿಕ್ಷಕರ ಜವಾಬ್ದಾರಿ ಅತ್ಯಂತ ಮಹತ್ವದ್ದಾಗಿದೆ. ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವುದರ ಜೊತೆಗೆ ಉತ್ತಮ ಸಂಸ್ಕಾರ, ಮೌಲ್ಯಗಳು ಹಾಗೂ ಮಾನವೀಯ ಗುಣಗಳನ್ನು ಬೆಳೆಸುವ ಕಾರ್ಯವೂ ಶಾಲೆಗಳಲ್ಲಿ ನಡೆಯಬೇಕು ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಹೇಳಿದರು.


ಮೊಡಂಕಾಪು ಇನ್ಫೆಂಟ್ ಜೀಸಸ್ ಚರ್ಚ್ ನ ಅನುಗ್ರಹ ಸಭಾಂಗಣದಲ್ಲಿ ಶನಿವಾರ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಶಿಕ್ಷಕರ ಕಲ್ಯಾಣ ನಿಧಿ ಬೆಳಗಾಳೂರು, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಚೇರಿ ದಕ್ಷಿಣ ಕನ್ನಡ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಬಂಟ್ವಾಳ, ಬಂಟ್ವಾಳ ತಾಲೂಕು ಶಿಕ್ಷಕರ ದಿನಾಚರಣಾ ಸಮಿತಿ ಹಾಗೂ ಕೆ.ಎನ್. ಫೌಂಡೇಶನ್ ಬೆಳಗಾಳೂರು ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಶಿಕ್ಷಕರ ದಿನಾಚರಣೆ ಹಾಗೂ ಗುರುವಂದನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಬೇಬಿ ಕುಂದರ್, ಮಾಜಿ ಸಚಿವ ರಮಾನಾಥ ರೈ ಮಾತನಾಡಿದರು. ಈ ಸಂದರ್ಭದಲ್ಲಿ ಬಂಟ್ವಾಳ ತಾಲೂಕು ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ ಶಿಕ್ಷಕರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ 2025-26ನೇ ಸಾಲಿನ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತರಿಗೆ ಸನ್ಮಾನ, ಬಂಟ್ವಾಳ ತಾಲೂಕು ನಿವೃತ್ತ ಶಿಕ್ಷಕರು ಹಾಗೂ ಬೋಧಕೇತರ ನೌಕರರಿಗೆ ಗೌರವ, ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ತಾಲೂಕಿನಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಅಭಿನಂದನೆ, ಎಸ್ಎಸ್ಎಲ್ಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಶಿಕ್ಷಕರ ಮಕ್ಕಳಿಗೆ ಅಭಿನಂದನೆ ಸಲ್ಲಿಸಲಾಯಿತು. ಅದೇ ರೀತಿ ಡ್ರಾಯಿಂಗ್ ಗ್ರೇಡ್ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳು ಹಾಗೂ ಕ್ರೀಡಾ ಕ್ಷೇತ್ರದಲ್ಲಿ ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ವೇದಿಕೆಯಲ್ಲಿ ಬಂಟ್ವಾಳ ಗ್ಯಾರಂಟಿ ಸಮಿತಿ ಅಧ್ಯಕ್ಷೆ ಜಯಂತಿ ಪೂಜಾರಿ, ಕೆ.ಎನ್. ಫೌಂಡೇಶನ್ ಚೇರ್ಮನ್ ರಾಜ್ಕೃಷ್ಣಮೂರ್ತಿ, ಇನ್ಫೆಂಟ್ ಜೀಸಸ್ ಶಿಕ್ಷಣ ಸಂಸ್ಥೆಯ ಜೊತೆ ಕಾರ್ಯದರ್ಶಿ ವಿಕ್ಟರ್ ಡಿಸೋಜ, ಉಪಸ್ಥಿತರಿದ್ದರು.