ಉಡುಪಿ/ಮಂಗಳೂರು, ಸೆ. 06 (DaijiworldNews/AA): ಉಡುಪಿ ಜಿಲ್ಲೆಯಾದ್ಯಂತ ಶನಿವಾರ ಮೋಡ ಕವಿದ ವಾತಾವರಣದ ನಡುವೆ ಕೆಲವೆಡೆ ಬಿಸಿಲು ಕಂಡುಬಂತು. ಶುಕ್ರವಾರ ರಾತ್ರಿ ಹಾಗೂ ಶನಿವಾರ ಮುಂಜಾನೆ ಜಿಲ್ಲೆಯ ಕೆಲವು ಭಾಗಗಳಲ್ಲಿ ಇಬ್ಬನಿ ಬಿದ್ದಿದ್ದು, ತುಸು ಚಳಿಯ ವಾತಾವರಣವೂ ಅನುಭವಕ್ಕೆ ಬಂದಿದೆ.

ಆದರೆ ಮಧ್ಯಾಹ್ನದ ವೇಳೆಗೆ ತಾಪಮಾನದಲ್ಲಿ ಗಣನೀಯ ಏರಿಕೆಯಾಗಿದ್ದು, ಹಲವೆಡೆ ತೀವ್ರ ಬಿಸಿಲು ಹಾಗೂ ಸೆಖೆಯ ವಾತಾವರಣ ನಿರ್ಮಾಣವಾಯಿತು.
ಇದೇ ವೇಳೆ, ನೆರೆಯ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಮುಂಗಾರು ದುರ್ಬಲಗೊಂಡಿದ್ದು, ವಾಡಿಕೆಯಂತೆ ನಿರೀಕ್ಷಿಸಲಾಗಿದ್ದ ಮಳೆಯ ಪ್ರಮಾಣದಲ್ಲಿ ಕೊರತೆ ಕಂಡುಬಂದಿದೆ. ಶನಿವಾರ ಜಿಲ್ಲೆಯ ಬಹುತೇಕ ಭಾಗಗಳಲ್ಲಿ ಮಳೆಯು ಬಿಡುವು ನೀಡಿತ್ತು. ಬೆಳಗ್ಗೆಯಿಂದಲೇ ಬಿಸಿಲು ಮತ್ತು ಮೋಡ ಕವಿದ ವಾತಾವರಣ ಕಂಡುಬಂತು. ಅಲ್ಲಲ್ಲಿ ಮಾತ್ರ ಹಗುರ ಮಳೆಯಾಗಿದೆ.
ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆಯ ಪ್ರಕಾರ, ಮುಂದಿನ ಎರಡು ದಿನಗಳಲ್ಲಿ ಜಿಲ್ಲೆಯ ಕೆಲವು ಭಾಗಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.