ಮಂಗಳೂರು, ಡಿ 29: ಎತ್ತಿನಹೊಳೆ ಯೋಜನೆ ಕೇವಲ ಹಣ ಹೊಡೆಯುವ ಉದ್ದೇಶದಿಂದ ಹಾಕಿಕೊಳ್ಳಲಾದ ಯೋಜನೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಹೇಳಿದ್ದಾರೆ.
ನಗರದ ಸಕ್ರ್ಯೂಟ್ ಹೌಸ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತ, ತುಮಕೂರು ಜಿಲ್ಲೆಗಳ ಬಯಲು ಪ್ರದೇಶಗಳಿಗೆ ಕುಡಿಯುವ ನೀರಿನ ಉದ್ದೇಶಕ್ಕಾಗಿ ಹಾಕಿಕೊಳ್ಳಲಾದ ಎತ್ತಿನಹೊಳೆ ಯೋಜನೆ ಯಶಸ್ವಿಯಾಗುವುದಿಲ್ಲ ಎಂದು ಹೇಳಿದರು.
ಜೆಡಿಎಸ್ ಮುಂದಿನ ಚುನಾವಣೆಯಲ್ಲಿ ಅಧಿಕಾರಕ್ಕೆ ಬರಲಿದೆ. ಅಧಿಕಾರಕ್ಕೆ ಬಂದ ಬಳಿಕ ಎತ್ತಿನಹೊಳೆ ಕಾಮಗಾರಿಯನ್ನು ನಿಲ್ಲಿಸುವ ಬಗ್ಗೆ ಚಿಂತನೆ ನಡೆಸುತ್ತೇನೆ. ಯಾರು ಎತ್ತಿನಹೊಳೆ ಯೋಜನೆಯಲ್ಲಿ ಹಣ ಹೊಡೆಯುವ ಕೆಲಸ ಮಾಡಿದ್ದಾರೆಯೋ ಅವರೆಲ್ಲರನ್ನು ಜೈಲಿಗೆ ಕಳುಹಿಸುತ್ತೇವೆ ಎಂದು ತಿಳಿಸಿದ್ದಾರೆ.
ಬಯಲು ಪ್ರದೇಶಕ್ಕೆ ನೀರು ಕೊಡುವುದಕ್ಕೆ ನಮ್ಮ ಒಪ್ಪಿಗೆಯಿದೆ. ಆದರೆ ನೀರಿಲ್ಲದ ಜಾಗದಿಂದ ನೀರು ಕೊಡುತ್ತೇವೆ ಎಂದು ಅಲ್ಲಿನ ಜನರನ್ನು ವಂಚಿಸಿ ಎತ್ತಿನಹೊಳೆ ಯೋಜನೆಯನ್ನು ರೂಪಿಸಲಾಗಿದೆ. ಇಲ್ಲಿ 29ಟಿಎಂಸಿ ನೀರು ದೊರೆಯುವುದಿಲ್ಲ ಎಂದು ಅಧಿಕಾರಿಗಳಿಗೆ, ಸಿಧಿಎಂಗೆ ಮಾಹಿತಿ ಇದೆ. ಆದರೂ ಒಂದು ವರ್ಷದಲ್ಲಿ ನೀರು ಕೊಡುತ್ತೇವೆ ಎಂದು 12,900 ಕೋಟಿ ರೂ. ಅಂದಾಜು ಪಟ್ಟಿ ನೀಡುತ್ತಿದ್ದಾರೆ. ನೀರಿಲ್ಲದೇ ಇದ್ದ ಮೇಲೆ ಇದು ಹಣ ಹೊಡೆಯುವ ಯೋಜನೆಯಲ್ಲದೆ ಮತ್ತೇನು ಎಂದು ಅವರು ಪ್ರಶ್ನಿಸಿದರು.