ಉಡುಪಿ, ಸೆ 13 (DaijiworldNews/SM): ಸರಕಾರಿ ಪದವಿಪೂರ್ವ ಕಾಲೇಜು ಬ್ರಹ್ಮಾವರದಲ್ಲಿ ಆಂಗ್ಲ ಭಾಷಾ ಉಪನ್ಯಾಸಕಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಶ್ರೀಮತಿ ಸವಿತಾ ವೈಯವರು ರಾಜ್ಯ ಮಟ್ಟದಲ್ಲಿ ಅತ್ಯುತ್ತಮ ಉಪನ್ಯಾಸಕಿ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.
ಇವರು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಪ್ರಯತ್ನಿಸುತ್ತಿದ್ದು, ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ವಿಶೇಷ ತರಗತಿಗಳನ್ನು ಮಾಡಿ ದ್ವಿತೀಯ ಪಿಯುಸಿಯಲ್ಲಿರುವ ಸುಮಾರು 160 ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಆಂಗ್ಲ ಭಾಷೆಯಲ್ಲಿ ಪ್ರತಿ ವರ್ಷ ಶೇಕಡಾ 99 ರಷ್ಟು ಫಲಿತಾಂಶ ಪಡೆಯುವಂತಾಗಿದೆ.
ಎನ್ ಎಸ್ ಎಸ್ ಯೋಜನಾಧಿಕಾರಿಯಾಗಿ ಕೆಲಸ ಮಾಡುತ್ತಿರುವ ಇವರು ಸತತ ಎಂಟು ವಾರ್ಷಿಕ ವಿಶೇಷ ಶಿಬಿರಗಳನ್ನು ಅತ್ಯಂತ ವಿಶೇಷ ರೀತಿಯಲ್ಲಿ ಆಯೋಜಿಸಿ ವಿದ್ಯಾರ್ಥಿಗಳಿಗೆ ಪ್ರಯೋಜನ ಸಿಗುವಂತೆ ಮಾಡಿದ್ದಾರೆ.
ರಾಜ್ಯಮಟ್ಟದ ಎನ್ ಎಸ್ ಎಸ್ ಬಾಲಕಿಯರ ಯುವಜನೋತ್ಸವವನ್ನು ಅದ್ಭುತವಾಗಿ ಆಯೋಜಿಸಿ, ರಾಜ್ಯಾದ್ಯಂತ ಬಂದಿರುವ ವಿದ್ಯಾರ್ಥಿನಿಯರಿಗೆ ಅತ್ಯುತ್ತಮ ವ್ಯವಸ್ಥೆ ಮಾಡಿ ಪ್ರಯೋಜನ ಪಡೆಯುವಂತರ ಮಾಡಿದ್ದಾರೆ.
ವಿವಿಧ ಕಾಲೇಜುಗಳ ಹದಿಹರೆಯದ ವಿದ್ಯಾರ್ಥಿಗಳಿಗೆ ಇಂದಿನ ಅಗತ್ಯವೆನಿಸಿರುವ ಜೀವನ ಕೌಶಲ್ಯಗಳ ಬಗ್ಗೆ ತರಬೇತಿ ನೀಡಿ ಅವರಲ್ಲಿ ಧೈರ್ಯ, ಆತ್ಮಸ್ಥೈರ್ಯ ಮೂಡಿಸಿ ಎಂತಹ ಸನ್ನಿವೇಶದಲ್ಲೂ ದೃತಿಗೆಡದಂತೆ ಮಾಡುವಲ್ಲಿ ನಿಸ್ವಾರ್ಥವಾಗಿ ಸೇವೆ ಸಲ್ಲಿಸಿದ್ದಾರೆ. ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಇವರ ಈ ಎಲ್ಲಾ ಕಾರ್ಯಗಳನ್ನು ಗುರುತಿಸಿರುವ ಸರಕಾರ ರಾಜ್ಯ ಮಟ್ಟದಲ್ಲಿ ಅತ್ಯುತ್ತಮ ಉಪನ್ಯಾಸಕಿಎಂದು ಪರಿಗಣಿಸಿದ್ದಾರೆ.