ನವದೆಹಲಿ, ಸೆ 13 (DaijiworldNews/SM): ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನ ಟ್ರಬಲ್ ಶೂಟರ್ ಹಾಗೂ ಪ್ರಭಾವಿ ನಾಯಕ, ಶಾಸಕ ಡಿಕೆ ಶಿವಕುಮಾರ್ ಅವರು ಮತ್ತೆ ನಾಲ್ಕು ದಿನ ಜೈಲಿನಲ್ಲೇ ಇರಬೇಕಾಗಿದೆ. ಮತ್ತೆ 4 ದಿನಗಳ ಕಾಲ ಜಾರಿ ನಿರ್ದೇಶನಾಲಯದ ವಶಕ್ಕೆ ನೀಡಿ ಇಂದು ಆದೇಶ ಹೊರಡಿಸಲಾಗಿದೆ.
ಜಾರಿ ನಿರ್ದೇಶನಾಲಯದ ಕಸ್ಟಡಿ ಶುಕ್ರವಾರ ಅಂತ್ಯಗೊಂಡಿತ್ತು. ಈ ಹಿನ್ನೆಲೆಯಲ್ಲಿ ಶುಕ್ರವಾರದಂದೇ ಶಿವಕುಮಾರ್ ಅವರನ್ನು ಅಧಿಕಾರಿಗಳು ರೋಸ್ ಅವೆನ್ಯೂ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು. ಈ ವೇಳೆ ಅನಾರೋಗ್ಯದ ಹಿನ್ನೆಲೆಯಲ್ಲಿ ಜಾಮೀನು ಮಂಜೂರು ಮಾಡಬೇಕೆಂದು ಡಿಕೆಶಿವಕುಮಾರ್ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರು ವಾದ ಮಂಡಿಸಿದರು. ಆದರೆ, ಇಡಿ ಪರ ವಕೀಲರು, ತಮ್ಮ ವಿಚಾರಣೆ ಪೂರ್ಣಗೊಂಡಿಲ್ಲ 5 ದಿನ ವಶಕ್ಕೆ ನೀಡಿ ಎಂದು ಇಡಿ ಪರ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ.ಎಂ.ನಟರಾಜ್ ವಾದಿಸಿದರು.
ವಾದಪ್ರತಿವಾದ ಆಲಿಸಿದ ಕೋರ್ಟ್ ಡಿಕೆಶಿಯವರನ್ನು ಸೆಪ್ಟೆಂಬರ್ ಹದಿನೇಳರ ತನಕ ಇಡಿ ವಶಕ್ಕೆ ನೀಡಿ ಆದೇಶ ನೀಡಿದೆ.