ಕಾಸರಗೋಡು, ಸೆ 14 (Daijiworld News/MSP): ಓಣಂ ಹಬ್ಬದ ಸವಿಯೂಟ ಮಾನವರಿಗೆ ಮಾತ್ರವಲ್ಲ ವಾನರರಿಗೂ ಭೋಜನ ವ್ಯವಸ್ಥೆ ಕಲ್ಪಿಸುವ ಮೂಲಕ ಕಾಸರಗೋಡು ತ್ರಿಕ್ಕರಿಪುರ ಇಡಯಿಲ್ ಕ್ಕಾಡ್ ನ ನಲ್ಲಿ ಈ ಬಾರಿಯೂ ಓಣಂ ಸದ್ಯ ಆಯೋಜಿಸುವ ಮೂಲಕ ಗಮನ ಸೆಳೆಯಿತು. ಹೊಟ್ಟೆ ತುಂಬಿಸಿಕೊಂಡ ವಾನರರು ಸಂತಸಪಟ್ಟವು.ತೃಕ್ಕರಿಪುರ ಇಡಯಿಲೆಕ್ಕಾಟ್ ಕಾವ್ ಎಂಬಲ್ಲಿ ಕೇರಳದ ನಾಡಹಬ್ಬ ಓಣಂ ಹಿನ್ನೆಲೆಯಲ್ಲಿ ಪ್ರತಿವರ್ಷದಂತೆ ಈ ಬಾರಿಯೂ ನೂರಾರು ವಾನರಗಳಿಗೆ ಸಾಮೂಹಿಕವಾಗಿ ಸಾಂಪ್ರದಾಯಿಕ ಔತಣ ಕೂಟ ವಿಶಿಷ್ಟವಾಗಿ ನಡೆಯಿತು.
ಅನ್ನ, ಬಾಳೆಹಣ್ಣು, ಕ್ಯಾರೆಟ್, ಬೀಟ್ರೋಟ್, ಸೌತೆ, ಕುಂಬಳಕಾಯಿ, ಸಿಹಿಕುಂಬಳಕಾಯಿ, ಆ್ಯಪಲ್, ಪಪ್ಪಾಯಿ ಮೊದಲಾದ ಹಲವು ಹತ್ತು ವೈವಿಧ್ಯ ತಿನಿಸುಗಳನ್ನು ವಾನರ ಪಡೆಯ ಭೋಜನಕ್ಕೆ ಇಡಯಿಲಕ್ಕಾಟ್ ನವೋದಯ ಗ್ರಂಥಾಲಯದ ಬಾಲವೇದಿಕೆ ವ್ಯವಸ್ಥೆ ಮಾಡಿತ್ತು.ಆಹಾರ ವಸ್ತುಗಳು, ಜೊತೆಗೆ ಕುಡಿಯಲು ಗ್ಲಾಸಿನಲ್ಲಿ ನೀರು ಕೂಡಾ ಸಜ್ಜುಗೊಳಿಸಲಾಗಿತ್ತು. ಆದರೆ ಎಲ್ಲಾ ಆಹಾರ ವಸ್ತುಗಳು ಉಪ್ಪು ರಹಿತವಾಗಿತ್ತು. ಬೆಂಚುಗಳನ್ನು ಸಾಲಾಗಿರಿಸಿ, ಬಾಳೆಎಲೆ ಹರಡಿ ವಾನರಗಳನ್ನು ಆಹ್ವಾನಿಸಲಾಯಿತು.
ಮಕ್ಕಳು ಬಾಳೆಎಲೆಯಲ್ಲಿ ಬಡಿಸಿದ ಕೂಡಲೇ ಇದೇ ಪರಿಸರದ ಮಾಣಿಕ್ಯ ಎಂಬ ಮಹಿಳೆ ಪಪ್ಪಿ ಎಂದು ಕರೆಯುತ್ತಿದ್ದಂತೆ ಮರದ ರೆಂಬೆಗಳಿಂದ ಧಾವಿಸಿ ಬಂದ ವಾನರು ಸಿಕ್ಕಿದ್ದು ಲಾಭವೆಂಬಂತೆ ಆಹಾರ ಸೇವಿಸಿ ಖುಷಿ ಪಟ್ಟುಕೊಂಡವು. ಕಾಡುಪ್ರಾಣಿಗಳಿಗೆ ಆಪತ್ತು ತರುವ ಉಪ್ಪು, ಬೇಕರಿ ತಿನಿಸು, ಪ್ಲಾಸ್ಟಿಕ್ ಸಹಿತ ರಾಸಾಯನಿಕ ವಸ್ತುಗಳನ್ನು ನಿಷೇಧಿಸಲಾಗಿತ್ತು.
ವಾನರ ಸಂತತಿ ನಾಶದತ್ತ ಸಾಗುತ್ತಿದೆ. ದಿನ ಕಳೆದಂತೆ ಸಂಖ್ಯೆ ಇಳಿಮುಖವಾಗುತ್ತಿದೆ. ಈ ನಿಟ್ಟಿನಲ್ಲಿ ಇಡಯಿಲ್ ಕ್ಕಾಡ್ ಪ್ರದೇಶದ ನಾಗರಿಕರ ಕಾರ್ಯ ಕೂಡಾ ಶ್ಲಾಘನೀಯವಾಗಿದೆ. ಸ್ಥಳದಲ್ಲಿ 40ರಷ್ಟು ವಾನರರು ಸ್ಥಳೀಯರ ಸಂರಕ್ಷಣೆಯಲ್ಲಿದೆ. ಪ್ರತಿ ವರ್ಷ ಓಣಂ ಸಂದರ್ಭದಲ್ಲಿ ವಾನರರಿಗೆ ಓಣಂಸದ್ಯ (ಔತಣ) ವನ್ನು ನೀಡಲಾಗುತ್ತಿದೆ. ಆರಂಭದಲ್ಲಿ ಆಹಾರ ಸೇವಿಸಲು ಬೆರಳಿಕೆಯಷ್ಟು ಮಾತ್ರ ವಾನರು ಬರುತ್ತಿದ್ದರು. ಈಗ ಹೆಚ್ಚುತ್ತಾ ಇದೆ.40ಕ್ಕೂ ಅಧಿಕ ವಾನರು ಬರುತ್ತಿದೆ.
ಆರಂಭದಲ್ಲಿ ವಾನರ ಭೋಜನ ವೀಕ್ಷಿಸಲು ಇಲ್ಲಿಗೆ ಆಗಮಿಸುವವರು ಹಲವು ತರದ ಆಹಾರ ಪದಾರ್ಥಗಳನ್ನು ತರುತ್ತಿದ್ದರು. ಆದರೆ ಉಪ್ಪು ಬಳಸಿದ ಆಹಾರ ಬೆಳವಣಿಗೆ ಮತ್ತು ವಂಶಾಭಿವೃದ್ದಿಗೆ ಸಮಸ್ಯೆ ತಲೆದೋರುತ್ತಿದೆ ಎಂಬ ಅಧ್ಯಯನ ವರದಿ ಹಿನ್ನೆಲೆಯಲ್ಲಿ ಉಪ್ಪು ಬೆರೆಸಿದ ಆಹಾರ ವಸ್ತುಗಳನ್ನು ನೀಡುತ್ತಿಲ್ಲ. ಉಪ್ಪು ರಹಿತ ಆಹಾರವನ್ನು ನೀಡಲಾಗುತ್ತಿದೆ. ಸುಖ, ಸಂತೋಷದ ಬಗ್ಗೆ ಮಾತ್ರ ಚಿಂತಿಸುವ ಮಧ್ಯೆ ಪ್ರಾಣಿಗಳಿಗೂ ಹಬ್ಬದೂಟ ನೀಡಿ ನೆಮ್ಮದಿ ಕಾಣುವ ಕಾಸರಗೋಡು ತ್ರಿಕ್ಕರಿಪುರ ಇಡಯಿಲ್ ಕ್ಕಾಡ್ ನ ನಾಗರಿಕರು ಶ್ಲಾಘನೆಗೆ ಪಾತ್ರರಾಗಿದ್ದಾರೆ.