ಕಾಸರಗೋಡು, ಸೆ 14 (Daijiworld News/RD): ಗಾಢ ನಿದ್ರೆಯಲ್ಲಿ ಕನಸು ಕಾಣುತ್ತ ಮಲಗಿದ್ದ ಎಳೆಯ ಕಂದಮ್ಮನಿಗೆ ನಾಗರ ಹಾವು ಕಡಿದು ಸಾವನ್ನಪ್ಪಿರುವ ಘಟನೆ ಪೆರ್ಲ ಸಮೀಪದ ಕಜಂಪಾಡಿಯಲ್ಲಿ ಸೆಪ್ಟೆಂಬರ್ 14 ರ ಶನಿವಾರ ನಡೆದಿದೆ.
ವಾಸಿಸಲು ಮನೆಯೂ ಇಲ್ಲದೆ ಗುಡಿಸಲಿನಲ್ಲಿ ಜೀವನ ಸಾಗಿಸುತ್ತಿದ್ದ ಕಾಂತಪ್ಪ, ಕುಸುಮ ದಂಪತಿ ಪುತ್ರ ಮೃತ ದೀಪಕ್ (3). ತಂದೆ ತಾಯಂದಿರ ನಡುವೆ ಮಲಗಿ ಗಾಢವಾಗಿ ನಿದ್ರಿಸುತ್ತಿದ್ದ ಈ ಮಗು, ಒಂದೇ ಸಮನೆ ಅಳುತ್ತಿರುವುದು ಕೇಳಿ ಎಚ್ಚರಗೊಂಡ ದಂಪತಿ, ಗಮನಿಸಿದಾಗ ಕಪಾಟಿನಡಿಯಿಂದ ಹಾವು ಕಂಡುಬಂದಿದೆ. ಕೇರೆ ಹಾವು ಎಂದು ಭಾವಿಸಿದ ಅವರು, ಮಗು ವಾಂತಿ ಮಾಡತೊಡಗಿದಾಗ ಗಾಬರಿಗೊಂಡು ಆಸ್ಪತ್ರೆಗೆ ಸಾಗಿಸಿದ್ದರೂ ಮಾರ್ಗಮಧ್ಯೆದಲ್ಲಿ ಪುಟ್ಟ ಕಂದಮ್ಮ ಕೊನೆಯುಸಿರೆಳೆದಿದೆ.
ಟಾರ್ಪಲ್ ಹಾಸಿದ ಮನೆಯಲ್ಲಿ ಇವರು ವಾಸಿಸುತ್ತಿದ್ದು, ಸ್ಥಳಕ್ಕೆ ಸಂಬಂಧಿಸಿದ ಸರಿಯಾದ ದಾಖಲೆ ಪತ್ರಗಳಿಲ್ಲದ ಕಾರಣ ಪಂಚಾಯಿತಿ, ಸರಕಾರದಿಂದ ಮನೆ ಅಥವಾ ಇತರ ಯಾವುದೇ ಸೌಲಭ್ಯಗಳು ದೊರೆತಿಲ್ಲ ಎಂದು ಸಮೀಪ ವಾಸಿಗಳು ತಿಳಿಸಿದ್ದಾರೆ. ಕಾಂತಪ್ಪ ಕೂಲಿ ಕಾರ್ಮಿಕರಾಗಿದ್ದು, ಪತ್ನಿ ಕುಸುಮ ಅವರು ಬೀಡಿ ಕಟ್ಟಿ ಜೀವನ ಸಾಗಿಸುತ್ತಿದ್ದಾರೆ.