ಮಂಗಳೂರು, ಸೆ.17 (DaijiworldNews/AK): ನಾಳೆ ನಡೆಯಲಿರುವ ಐತಿಹಾಸಿಕ ಸಚಿವ ಸಂಪುಟ ಸಭೆಯಲ್ಲಿ ಭಾಗವಹಿಸಲು ಮಂಗಳೂರಿಗೆ ಆಗಮಿಸಿದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ವಿಮಾನ ನಿಲ್ದಾಣದಲ್ಲಿ ಪೊಲೀಸ್ ಪಡೆಯಿಂದ ಗೌರವ ರಕ್ಷೆ ಸ್ವೀಕರಿಸಿದರು.


ಕಸ್ತೂರಿ ರಂಗನ್ ವರದಿಯನ್ನು ನಮ್ಮ ಸರ್ಕಾರ ಈ ಹಿಂದೆಯೇ ಸ್ಪಷ್ಟವಾಗಿ ತಿರಸ್ಕರಿಸಿದೆ. ಆದರೂ ಕೇಂದ್ರದಿಂದ ಬಂದಿರುವ ನಿರ್ದೇಶನಗಳ ಹಿನ್ನೆಲೆಯಲ್ಲಿ ಸ್ಥಳೀಯ ರೈತರಲ್ಲಿ ಆತಂಕ ಮೂಡಿರುವುದು ಗಮನಕ್ಕೆ ಬಂದಿದೆ. ಈ ವಿಷಯದಲ್ಲಿ ರೈತರು ಹಾಗೂ ಜನಸಾಮಾನ್ಯರ ಹಿತ ಕಾಪಾಡುವುದು ನಮ್ಮ ಮೊದಲ ಆದ್ಯತೆ ಎಂದರು.
ಕಸ್ತೂರಿ ರಂಗನ್ ವರದಿಯ ಕುರಿತು ವಿಸ್ತೃತ ಚರ್ಚೆ ನಡೆಸಲಾಗುತ್ತದೆ. ಎರಡನೇ ದಿನ ಪೂರ್ಣ ಪ್ರಮಾಣದಲ್ಲಿ ರೈತರ ಸಮಸ್ಯೆಗಳ ಬಗ್ಗೆಯೇ ಚರ್ಚೆ ನಡೆಸಿ, ಎಲ್ಲಾ ಶಾಸಕರ ಅಭಿಪ್ರಾಯಗಳನ್ನು ದಾಖಲಿಸಿಕೊಳ್ಳಲಾಗುತ್ತದೆ ಎಂದು ತಿಳಿಸಿದರು. ಜನರ ಬದುಕಿಗೆ ಧಕ್ಕೆ ಬಾರದಂತೆ ನೋಡಿಕೊಳ್ಳಲು ಸರ್ಕಾರ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಭರವಸೆ ನೀಡಿದರು.
ಉಮರ್ ಖಾಲಿದ್ ವಿಚಾರವಾಗಿ ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ನೀಡಿರುವ ಹೇಳಿಕೆಯ ಬಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಆ ಹೇಳಿಕೆಯ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ ಎಂದರು.
ನಾಳೆಯ ಸಭೆಯ ಹಿನ್ನೆಲೆಯಲ್ಲಿ ಈಗಾಗಲೇ ನಗರದಲ್ಲಿ ಸಿದ್ಧತೆಗಳು ಪೂರ್ಣಗೊಂಡಿದ್ದು, ಮುಖ್ಯಮಂತ್ರಿಗಳ ವಾಹನವು ಜೀರೋ ಟ್ರಾಫಿಕ್ನಲ್ಲಿ ಸಂಚರಿಸಿತು. ಸಚಿವ ಸಂಪುಟ ಸಭೆಯ ಮೂಲಕ ಕರಾವಳಿ ಭಾಗದ ಅಭಿವೃದ್ಧಿಗೆ ಹಲವು ಪ್ರಮುಖ ನಿರ್ಧಾರಗಳನ್ನುಕೈಗೊಳ್ಳುವ ನಿರೀಕ್ಷೆಯಿದೆ.
ನಾಳೆ ಶುಕ್ರವಾರ ಬೆಳಿಗ್ಗೆ ಸಿಎಂ ಹಾಗೂ ಸಚಿವರು ಕದ್ರಿ ದೇವಸ್ಥಾನಕ್ಕೆ ಭೇಟಿ ನೀಡಲಿದ್ದು, ಬಳಿಕ ಬೆಳಿಗ್ಗೆ 10 ಗಂಟೆಯ ನಂತರ ಸಂಪುಟ ಸಭೆ ಆರಂಭವಾಗಲಿದೆ. ಸಚಿವರ ಪ್ರಯಾಣಕ್ಕೆ ವಿಶೇಷ ಬಸ್ ವ್ಯವಸ್ಥೆ, ಪಂಪುವೆಲ್ನಲ್ಲಿ ಅದ್ದೂರಿ ಸ್ವಾಗತ ಹಾಗೂ ತಣ್ಣೀರುಬಾವಿ ಕಡಲ ತೀರದಲ್ಲಿ ಸಾಂಪ್ರದಾಯಿಕ ಶೈಲಿಯ ಡಿನ್ನರ್ ವ್ಯವಸ್ಥೆ ಮಾಡಲಾಗಿದೆ.