ಮಂಗಳೂರು, ಡಿ 29:ಹಿರಿಯ ಕಾಂಗ್ರೆಸ್ ಮುಖಂಡ ಜನಾರ್ದನ ಪೂಜಾರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಸಚಿವ ರಮಾನಾಥ ರೈ ವಿರುದ್ಧ ಬಿಜೆಪಿಯ ಅಲ್ಪಸಂಖ್ಯಾಂತರ ಮೋರ್ಚಾ ರಾಜ್ಯ ಉಪಾಧ್ಯಕ್ಷ ರಹೀಂ ಉಚ್ಚಿಲ್ ಕಿಡಿ ಕಾರಿದ್ದಾರೆ.
ದಾಯ್ಜಿವರ್ಲ್ಡ್ ವಾಹಿನಿ ಜೊತೆಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದಲ್ಲಿ ಅನೇಕ ರಾಜಕಾರಣಿಗಳನ್ನು ಬೆಳೆಸಿದ್ದು ಹಿರಿಯ ಕಾಂಗ್ರೆಸ್ ಮುಖಂಡರಾದ ಜನಾರ್ದನ ಪೂಜಾರಿ. ಇದೀಗ ಪೂಜಾರಿಯವರನ್ನು ಕಾಂಗ್ರೆಸ್ ಪಕ್ಷ ಮೂಲೆಗುಂಪು ಮಾಡುತ್ತಿದೆ. ಪಕ್ಷದ ಕೆಲ ರಾಜಕಾರಣಿಗಳು ಪೂಜಾರಿಯವರನ್ನು ಕಡೆಗಣಿಸುತ್ತಿದ್ದಾರೆ. ಕಾಂಗ್ರಸ್ ಪಕ್ಷದ ಈ ವರ್ತನೆ ಸರಿಯಲ್ಲ ಎಂದು ತಿಳಿಸಿದರು.
ಹಿರಿಯ ಮುಖಂಡರಾದ ಜನಾರ್ದನ ಪೂಜಾರಿ ಓರ್ವ ರಾಜಕಾರಣಿ ಮಾತ್ರವಲ್ಲ. ಸಮಾಜ ಸೇವಕರು, ದೈವ ಭಕ್ತರು, ಬಿಲ್ಲವ ಸಮಾಜದ ಸುಧಾರಕರು, ಮಂಗಳೂರು ದಸರಾದ ರೂವಾರಿ, ಶೋಷಿತ ವರ್ಗಕ್ಕೆ ಸಾಮಾಜಿಕ ನ್ಯಾಯ ಒದಗಿಸಿಕೊಟ್ಟವರು. ಇಂತಹ ಹಿರಿಯ ವ್ಯಕ್ತಿಗೆ ಅವಮಾನಿಸಿದ್ದು ಇಡೀ ಬಿಲ್ಲವ ಸಮುದಾಯಕ್ಕೆ ಮಾಡಿದ ಅವಮಾನ. ಪೂಜಾರಿಯವರನ್ನು ತೀರಾ ಅವಾಚ್ಯವಾಗಿ ನಿಂದಿಸಿ ಅವರ ಕಣ್ಣಲ್ಲಿ ನೀರು ಬರುವಂತೆ ರೈ ಮಾಡಿದ್ದಾರೆ. ಪೂಜಾರಿಯ ಕಣ್ಣೀರು ರೈಗೆ ಶಾಪವಾಗಲಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಅನೇಕ ರಾಜಕಾರಣಿಗಳಿಗೆ, ಜನರಿಗೆ ಆದರ್ಶ ವ್ಯಕ್ತಿಯಾಗಿರುವ ಪೂಜಾರಿಯ ಕಣ್ಣೀರು ಬಿಲ್ಲವ ಸಮುದಾಯಕ್ಕೆ ಮಾತ್ರ ನೋವು ಕೊಟ್ಟಿಲ್ಲ. ಮುಸ್ಲಿಂ ಸಮುದಾಯದವರಿಗೂ ನೋವು ಕೊಟ್ಟಿದೆ. ಪೂಜಾರಿಯ ಕಣ್ಣೀರಿನ ಶಾಪ ಮುಂದಿನ ಚುನಾವಣೆಯಲ್ಲಿ ರೈ ಗೆ ತಟ್ಟಲಿದೆ ಎಂದು ಆಕ್ರೋಶದಿಂದ ನುಡಿದರು.