ಮಂಗಳೂರು, ಸೆ.26 (DaijiworldNews/TA): ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ದಕ್ಷಿಣ ಕನ್ನಡ ಜಿಲ್ಲಾ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಸಂಘದ ವತಿಯಿಂದ ಸೆಪ್ಟೆಂಬರ್ 28ರಂದು ಮಂಗಳೂರಿನಲ್ಲಿ ಪ್ರತಿಭಟನೆ ಹಾಗೂ ಮುಷ್ಕರ ಹಮ್ಮಿಕೊಳ್ಳಲಾಗಿದೆ ಎಂದು ಅಧ್ಯಕ್ಷೆ ತಾರಾ ಬಲ್ಲಾಳ್ ರವರು ತಿಳಿಸಿದ್ದಾರೆ.

ಮಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂಗನವಾಡಿ ಕೇಂದ್ರಗಳು ಆರಂಭವಾಗಿ 50 ವರ್ಷ ಕಳೆದರೂ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಅತ್ಯಲ್ಪ ಗೌರವಧನದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಸಂಘ ತಿಳಿಸಿದೆ. ಪ್ರಸ್ತುತ ಕಾರ್ಯಕರ್ತೆಯರಿಗೆ 12,000 ರೂ. ಹಾಗೂ ಸಹಾಯಕಿಯರಿಗೆ 6,000 ರೂ. ಗೌರವಧನ ನೀಡಲಾಗುತ್ತಿದ್ದು, ಅದೂ ಎರಡು–ಮೂರು ತಿಂಗಳಿಗೊಮ್ಮೆ ಪಾವತಿಯಾಗುತ್ತಿದೆ ಎಂದು ಆರೋಪಿಸಲಾಗಿದೆ. ಪ್ರತಿ ತಿಂಗಳ 5ನೇ ತಾರೀಖಿನೊಳಗೆ ಗೌರವಧನ ಪಾವತಿಸಬೇಕು. ಫಲಾನುಭವಿಗಳಿಗೆ ನೀಡುವ ಮೊಟ್ಟೆಗೆ ಸಮರ್ಪಕವಾಗಿ ಹಣ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.
ಈ ಎಲ್ಲ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಸೆ.28ರಂದು ಬೆಳಗ್ಗೆ ಜ್ಯೋತಿ ವೃತ್ತದಿಂದ ಮಿನಿ ವಿಧಾನಸೌಧದವರೆಗೆ ಜಾಥಾ ನಡೆಸಲಾಗುವುದು. ಬಳಿಕ ಮಿನಿ ವಿಧಾನಸೌಧದ ಬಳಿ ಮುಷ್ಕರ ನಡೆಸಲು ನಿರ್ಧರಿಸಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಸಂಘ ತಿಳಿಸಿದೆ.