ಕಡಬ, ಸೆ.26 (DaijiworldNews/TA): ಕಡಬ-ಉಪ್ಪಿನಂಗಡಿ ಮುಖ್ಯರಸ್ತೆಯ ಅಲಂಕಾರು ಗ್ರಾಮದ ಆಚಾರಿ ಕೋಟ್ಯಾ ಬಳಿ ಕಪ್ಪು ಬಣ್ಣದ ಥಾರ್ ವಾಹನ ಬೈಕ್ಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ 42 ವರ್ಷದ ಬೈಕ್ ಸವಾರ ಮೃತಪಟ್ಟಿರುವ ಘಟನೆ ಸೆಪ್ಟೆಂಬರ್ 25ರ ರಾತ್ರಿ ನಡೆದಿದೆ. ಅಪಘಾತದ ಬಳಿಕ ಥಾರ್ ಚಾಲಕ ವಾಹನ ನಿಲ್ಲಿಸದೆ ಸ್ಥಳದಿಂದ ಪರಾರಿಯಾಗಿದ್ದಾನೆ ಎನ್ನಲಾಗಿದೆ.

ಕಡಬ ತಾಲೂಕಿನ ಅಲಂಕಾರು ಗ್ರಾಮದ ನಿವಾಸಿ ರಂಜಿತ್ ಬಿ. (23) ನೀಡಿದ ದೂರಿನ ಪ್ರಕಾರ, ಅಲಂಕಾರು ನಿವಾಸಿ ಲೋಕೇಶ್ ನಾಡ್ತಿಲ (42) ಅವರು KA-21-Y-5006 ನೋಂದಣಿ ಸಂಖ್ಯೆಯ ಮೋಟಾರ್ ಸೈಕಲ್ನಲ್ಲಿ ಅಲಂಕಾರು ಪೇಟೆಯಿಂದ ಆಚಾರಿ ಕೋಟ್ಯಾ ಕಡೆಗೆ ತೆರಳುತ್ತಿದ್ದರು. ಈ ವೇಳೆ ಆಚಾರಿ ಕೋಟ್ಯಾ ಬಳಿ KA-21-MB-0233 ನೋಂದಣಿ ಸಂಖ್ಯೆಯ ಕಪ್ಪು ಬಣ್ಣದ ಥಾರ್ ವಾಹನವನ್ನು ಅದರ ಚಾಲಕ ಅಜಾಗರೂಕತೆ ಹಾಗೂ ನಿರ್ಲಕ್ಷ್ಯದಿಂದ ಚಲಾಯಿಸಿಕೊಂಡು ಬಂದು ಲೋಕೇಶ್ ಅವರ ಬೈಕ್ಗೆ ಹಿಂದಿನಿಂದ ಡಿಕ್ಕಿ ಹೊಡೆದಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಡಿಕ್ಕಿಯ ರಭಸಕ್ಕೆ ಲೋಕೇಶ್ ಅವರು ಬೈಕ್ ಸಮೇತ ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ಆದರೆ, ಅಪಘಾತದ ಬಳಿಕ ಆರೋಪಿ ಚಾಲಕ ವಾಹನವನ್ನು ನಿಲ್ಲಿಸದೆ ಥಾರ್ ಸಮೇತ ಸ್ಥಳದಿಂದ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಗಾಯಗೊಂಡಿದ್ದ ಲೋಕೇಶ್ ಅವರನ್ನು ದೂರುದಾರ ರಂಜಿತ್ ಬಿ. ಹಾಗೂ ಮತ್ತೊಬ್ಬ ಸ್ಥಳೀಯರು ಆಸ್ಪತ್ರೆಗೆ ಕರೆದೊಯ್ದರು. ಆದರೆ, ಅವರನ್ನು ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಕುರಿತು ಕಡಬ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 112/2026ರಂತೆ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 281, 106 ಹಾಗೂ ಭಾರತೀಯ ಮೋಟಾರು ವಾಹನ ಕಾಯ್ದೆ (IMV Act) ಕಲಂ 134(a) ಮತ್ತು (b) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.