ಮಂಗಳೂರು, ಸೆ.27 (DaijiworldNews/TA): ಪಾಂಡೇಶ್ವರದ ಎಮ್ಮೆಕೆರೆಯ ಸಮಾವೇಶ ಸಭಾಂಗಣದಲ್ಲಿ ಶನಿವಾರ ನಡೆದ ಕಾರ್ಯಕ್ರಮದ ವೇಳೆ ಬಾಲ್ಕನಿ ತಡೆಗೋಡೆ ಕುಸಿದು ಗಂಭೀರವಾಗಿ ಗಾಯಗೊಂಡಿದ್ದ 16 ವರ್ಷದ ವಿದ್ಯಾರ್ಥಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.

ಮೃತರನ್ನು ಹಳೆಯಂಗಡಿ ನಿವಾಸಿ ಹಾಗೂ ಸಂತ ಅಲೋಶಿಯಸ್ ಪಿಯು ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿ ಮೊಯ್ದೀನ್ ಶಮಾಜ್ (16) ಎಂದು ಗುರುತಿಸಲಾಗಿದೆ. ಶನಿವಾರ ರಾತ್ರಿ 11:33ರ ಸುಮಾರಿಗೆ ಉಡುಪಿಯ ಹೈಲ್ಯಾಂಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಘಟನೆಗೆ ಸಂಬಂಧಿಸಿ ಮೃತ ವಿದ್ಯಾರ್ಥಿಯ ತಂದೆ ಮೊಹಮ್ಮದ್ ಎಲಿಯಾಸ್ ನೀಡಿದ ದೂರಿನ ಆಧಾರದ ಮೇಲೆ ಮಂಗಳೂರು ದಕ್ಷಿಣ ಠಾಣೆ ಪೊಲೀಸರು ಕಟ್ಟಡದ ಮಾಲೀಕ ಪರೀಕ್ಷಿತ್ ರೈ ಹಾಗೂ ಕಾರ್ಯಕ್ರಮ ಆಯೋಜಕ, ವಕೀಲ ದಿನಕರ್ ಶೆಟ್ಟಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಶನಿವಾರ ಮಧ್ಯಾಹ್ನ ಸುಮಾರು 2:50ರ ವೇಳೆಗೆ ರಾಮ ಲಕ್ಷ್ಮಿ ನಾರಾಯಣ್ ಸಭಾಂಗಣದಲ್ಲಿ ಆಲ್ ಕಾಲೇಜು ವಿದ್ಯಾರ್ಥಿ ಸಂಘದ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯುತ್ತಿತ್ತು. ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಆಗಮಿಸಿದ್ದರು. ವಿದ್ಯಾರ್ಥಿಗಳು ಸಭಾಂಗಣ ಪ್ರವೇಶಿಸಲು ರ್ಯಾಲಿಯಲ್ಲಿ ಸಾಗುತ್ತಿದ್ದ ವೇಳೆ, ಕೆಲವರು ಮೊದಲ ಮಹಡಿಯ ಹಾದಿಯಲ್ಲಿ ನಿಂತಿದ್ದರು.
ಈ ವೇಳೆ ಕಟ್ಟಡದ ಕೆಳಭಾಗದಲ್ಲಿ ನಿಂತು ಮೆರವಣಿಗೆಯನ್ನು ವೀಕ್ಷಿಸುತ್ತಿದ್ದ ಶಮಾಜ್ ಅವರ ಮೇಲೆ ಮೊದಲ ಮಹಡಿಯ ಹಾದಿಯ ತಡೆಗೋಡೆ ಏಕಾಏಕಿ ಕುಸಿದು ಬಿದ್ದಿದೆ. ಘಟನೆಯಲ್ಲಿ ಅವರ ತಲೆ, ಭುಜ ಹಾಗೂ ಎರಡೂ ಕಾಲುಗಳಿಗೆ ಗಂಭೀರ ಗಾಯಗಳಾಗಿದ್ದವು. ಸಹ ವಿದ್ಯಾರ್ಥಿಗಳು ಕೂಡಲೇ ಅವರನ್ನು ಕಾರಿನಲ್ಲಿ ಆಸ್ಪತ್ರೆಗೆ ಕರೆದೊಯ್ದು, ಬಳಿಕ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಮೊಹಮ್ಮದ್ ಸನಾನ್ ಅಹಮ್ಮದ್, ಮೊಹಮ್ಮದ್ ಹನೀಫ್ ಹಾಗೂ ದಾವೂದ್ ಸೇರಿದಂತೆ ಇತರ ವಿದ್ಯಾರ್ಥಿಗಳಿಗೂ ಗಾಯಗಳಾಗಿವೆ.
ಕಟ್ಟಡವು ಶಿಥಿಲಾವಸ್ಥೆಯಲ್ಲಿದ್ದರೂ ಯಾವುದೇ ಸುರಕ್ಷತಾ ಮುನ್ನೆಚ್ಚರಿಕೆಗಳನ್ನು ಕೈಗೊಳ್ಳದೆ ಕಾರ್ಯಕ್ರಮಕ್ಕೆ ಅನುಮತಿ ನೀಡಲಾಗಿದೆ ಎಂದು ಮೃತ ವಿದ್ಯಾರ್ಥಿಯ ತಂದೆ ದೂರಿನಲ್ಲಿ ಆರೋಪಿಸಿದ್ದಾರೆ. ಅಲ್ಲದೆ, ವಿದ್ಯಾರ್ಥಿಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳದೆ ಹಾಗೂ ಕಟ್ಟಡದ ದುರ್ಬಲ ಸ್ಥಿತಿಯ ಬಗ್ಗೆ ಎಚ್ಚರಿಕೆ ನೀಡದೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ. ಈ ಕುರಿತು ಪೊಲೀಸರು ಭಾರತೀಯ ನ್ಯಾಯ ಸಂಹಿತೆ, 2023ರ ಸೆಕ್ಷನ್ 125(ಎ), 125(ಬಿ), 290 ಮತ್ತು 106(1)ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.