ಭಟ್ಕಳ, ಸೆ 16 (Daijiworld News/RD): ಬಂದರಿನಿಂದ ಮೀನುಗಾರಿಕೆಗೆ ತೆರಳಿದ್ದ ದೋಣಿಯೊಂದು ಅಲೆಗಳ ಅಬ್ಬರಕ್ಕೆ ಸಿಲುಕಿ ಮುಳಗಡೆಗೊಂಡಿದ್ದು ಐದು ಮಂದಿ ಮೀನುಗಾರರನ್ನು ರಕ್ಷಿಸಿದ ಘಟನೆ ಭಟ್ಕಳ ಸಮೀಪದ ಅರಬ್ಬಿ ಸಮುದ್ರದಲ್ಲಿ ಭಾನುವಾರ ಸಂಭವಿಸಿದೆ.
ಶ್ರೀ ಲಕ್ಷ್ಮೀವೆಂಕಟೇಶ ಹೆಸರಿನ ಈ ದೋಣಿ ರಾಘವೇಂದ್ರ ಖಾರ್ವಿ ಎಂಬುವವರಿಗೆ ಸೇರಿದ್ದು. ರಾಘವೇಂದ್ರ, ಚೇತನ, ಉದಯಕುಮಾರ, ಶನಿಯಾರ, ಸುಬ್ರಹ್ಮಣ್ಯ ಎಂಬವರನ್ನು ಅಪಾಯದಿಂದ ರಕ್ಷಿಸಲಾಗಿದೆ.
ಭಾನುವಾರ ಬೆಳಿಗ್ಗೆ ತಾಲೂಕಿನ ಕರಿಕಾಲ್ ಬಂದರಿನಿಂದ ಮೀನುಗಾರಿಕೆಗೆ ತೆರಳಿದ್ದು ಅಲೆಗಳ ಅಬ್ಬರಕ್ಕೆ ಸಿಲುಕಿ ದೋಣಿ, ಬುಡದಿಂದ ನೀರು ತುಂಬಿಕೊಂಡ ಪರಿಣಾಮ ಈ ದುರ್ಘಟನೆ ಸಂಭವಿಸಿದೆ ಎಂದು ಹೇಳಲಾಗುತ್ತಿದ್ದು ಸಮೀಪವೇ ಇದ್ದ ಎರಡು ಯಾಂತ್ರಿಕ ಬೋಟುಗಳ ಸಹಾಯದಿಂದ ಮುಳುಗುತ್ತಿದ್ದ ಲಕ್ಷ್ಮೀ ವೆಂಕಟೇಶ ಬೋಟ್ ಹಾಗೂ ಅದರಲ್ಲಿದ್ದ ಐವರು ಮೀನುಗಾರರನ್ನು ರಕ್ಷಿಸಲಾಗಿದೆ.
ಈ ಬಗ್ಗೆ ಭಟ್ಕಳ ಕರಾವಳಿ ಕಾವಲು ಪಡೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.