ಬೆಳ್ತಂಗಡಿ, ಸೆ 16 (Daijiworld News/RD): ರಾಜ್ಯದ ಪ್ರಮುಖ ಹೆದ್ದಾರಿ ಮಾರ್ಗ ಚಾರ್ಮಾಡಿ ಘಾಟ್ ನಲ್ಲಿ ಲಘು ವಾಹನ ಸಂಚಾರಕ್ಕೆ ದ.ಕ. ಜಿಲ್ಲಾಧಿಕಾರಿಯವರು ಅನುಮತಿ ನೀಡಿದ್ದು, ಜೊತೆಗೆ ಕೆಲವೊಂದು ನಿರ್ಬಂಧಗಳನ್ನು ವಿಧಿಸುವ ಮೂಲಕ ವಾಹನ ಸಂಚಾರಕ್ಕೆ ಅವಕಾಶ ನೀಡಿದ್ದಾರೆ.
ಸದ್ಯಕ್ಕೆ ಮಾರ್ಗದಲ್ಲಿ ಕಾರು, ಜೀಪು, ಟೆಂಪೋ, ವ್ಯಾನ್, ಲಘು ಸರಕು ಸಾಗಾಟ ವಾಹನ (ಮಿನಿ ವ್ಯಾನ್) ದ್ವಿಚಕ್ರ ವಾಹನಗಳು ಹಾಗೂ ಆಂಬ್ಯುಲೆನ್ಸ್ ಸಂಚಾರಕ್ಕಷ್ಟೇ ಅನುಮತಿ ನೀಡಲಾಗಿದೆ. ಇವುಗಳು ಮುಂಜಾನೆ ಆರರಿಂದ ಸಂಜೆ ಆರು ಗಂಟೆಗಳವರೆಗೆ ಸಂಚಾರ ನಡೆಸಬಹುದಾಗಿದೆ.
ಇನ್ನು ವಾಹನಗಳು ಗಂಟೆಗೆ 20 ಕಿ.ಮೀ ವೇಗದ ಮಿತಿಯಲ್ಲಿ ಸಂಚರಿಸಬೇಕು.ಅಲ್ಲದೆ ಮಾರ್ಗದ ನಡುವೆ ವಾಹನ ನಿಲ್ಲಿಸಿ ಫೋಟೋಗ್ರಫಿ ನಡೆಸುವುದು, ಸೆಲ್ಫಿ ತೆಗೆದುಕೊಳ್ಳುವುದನ್ನು ನಿಷೇಧಿಸಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧು ಬಿ. ರೂಪೇಶ್ ಹೇಳಿದ್ದಾರೆ.
ಪಶ್ಚಿಮ ಘಟ್ಟ ಹಾಗೂ ಕರಾವಳಿಯಲ್ಲಿ ಕಳೆದ ಕೆಲವು ದಿನಗಳಿಂದ ಸತತವಾಗಿ ಸುರಿಯುತ್ತಿದ್ದ ಮಳೆಗೆ ಚಿಕ್ಕಮಗಳೂರಿನಿಂದ ಮಂಗಳೂರು, ಉಡುಪಿ, ಧರ್ಮಸ್ಥಳಕ್ಕೆ ಸಂಪರ್ಕ ಕಲ್ಪಿಸುತ್ತಿದ್ದ ಚಾರ್ಮಾಡಿ ಘಾಟಿ ರಸ್ತೆಯ ಹಲವು ಕಡೆ ಗುಡ್ಡ ಕುಸಿದಿದ್ದ ಪರಿಣಾಮ ವಾಹನ ಸಂಚಾರವನ್ನು ನಿಷೇಧಿಸಲಾಗಿತ್ತು. ಆದರೆ ಇದೀಗ ರಸ್ತೆ ದುರಸ್ತಿ ಕಾಮಗಾರಿ ಪೂರ್ತಿಗೊಂಡಿದ್ದು ಲಘು ವಾಹನ ಸಂಚಾರಕ್ಕೆ ಅನುಮತಿ ನೀಡಿದ್ದಾರೆ.