ಮಂಗಳೂರು, ಸೆ.29 (DaijiworldNews/AA): ಮಂಗಳೂರು ನಗರದ ಹೃದಯಭಾಗದಲ್ಲಿರುವ ರಾಷ್ಟ್ರೀಯ ಹೆದ್ದಾರಿ ಹಾಗೂ ನಗರದ ಪ್ರಮುಖ ರಸ್ತೆಗಳನ್ನು ಸಂಪರ್ಕಿಸುವ ನಂತೂರು ಜಂಕ್ಷನ್ ದಿನೇ ದಿನೇ ಅಪಾಯಕಾರಿ ಅಪಘಾತ ವಲಯವಾಗಿ ಬದಲಾಗುತ್ತಿದ್ದು, ಸಂಬಂಧಪಟ್ಟ ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.




ನಂತೂರು ಸರ್ಕಲ್ ಹಾಗೂ ವಿಭಜಕಕ್ಕೆ ಸಿಮೆಂಟ್ ಬ್ಲಾಕ್ಗಳನ್ನು ಇರಿಸಲಾಗಿದ್ದು, ಇದು ಅಪಘಾತಗಳಿಗೆ ಪ್ರಮುಖ ಕಾರಣ ಎಂದು ಆರೋಪಿಸಲಾಗಿದೆ. ಈ ಜಂಕ್ಷನ್ನಲ್ಲಿ ಓಡಾಡುವ ವಾಹನಗಳ ಸಂಖ್ಯೆ ಅತೀ ಹೆಚ್ಚು. ಹಗಲಿನ ವೇಳೆಯಲ್ಲಿ ಟ್ರಾಫಿಕ್ ಪೊಲೀಸ್ ಇರುತ್ತಾರೆ ಹಾಗೂ ಮತ್ತು ಇಲ್ಲಿ ಹಾಕಿದ ಸಿಮೆಂಟ್ ಬ್ಲಾಕ್ಗಳು ಕಾಣಿಸುವುದರಿಂದ ವಾಹನ ಸವಾರರು ಹೇಗೋ ಸಂಚರಿಸುತ್ತಾರೆ. ಆದರೆ, ನಿಜವಾದ ಅಪಾಯ ಕಾಯುತ್ತಿರುವುದು ರಾತ್ರಿಯ ವೇಳೆಯಲ್ಲಿ!
ಈ ಪ್ರದೇಶದಲ್ಲಿ ಪದೇ ಪದೇ ವಿದ್ಯುತ್ ಕೈಕೊಡುವುದರಿಂದ ಇಡೀ ಜಂಕ್ಷನ್ ಕತ್ತಲಲ್ಲಿ ಮುಳುಗಿಹೋಗುತ್ತದೆ. ಈ ವೇಳೆ ಸಿಮೆಂಟ್ ಬ್ಲಾಕ್ಗಳು ಕಾಣಿಸುವುದೇ ಇಲ್ಲ. ಇದಕ್ಕೆ ರಸ್ತೆ ಸುರಕ್ಷಾ ಬಣ್ಣಗಳಾಗಲಿ, ರಿಪೇಲೆಕ್ಟರ್ ಆಗಲಿ ಹಾಕದ ಕಾರಣ ಸಿಮೆಂಟ್ ಬ್ಲಾಕ್ಗಳು ರಾತ್ರಿ ವೇಳೆ ವಾಹನ ಸವಾರರಿಗೆ ಕಾಣಿಸುವುದಿಲ್ಲ. ಪರಿಣಾಮ ಇಲ್ಲಿ ನಿರಂತರ ಅಪಘಾತಗಳು ಸಂಭವಿಸುತ್ತಿವೆ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಮಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ತೀವ್ರ ಆಕ್ರೋಶ ಹೊರಹಾಕಿದ್ದಾರೆ. "ಕನಿಷ್ಠ ರಿಫ್ಲೆಕ್ಟರ್ಗಳಂತಹ ಮೂಲಭೂತ ಸುರಕ್ಷತಾ ಕ್ರಮಗಳೂ ಇಲ್ಲದೆ ಈ ಬ್ಲಾಕ್ಗಳನ್ನು ಏಕೆ ಇಡಲಾಗಿದೆ? ಅಪಘಾತಗಳ ಸಂಖ್ಯೆ ಹೆಚ್ಚುತ್ತಿದ್ದರೂ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿರುವುದೇಕೆ? ಜನರ ಪ್ರಾಣದ ಬೆಲೆ ಇವರಿಗೆ ಇನ್ನೂ ತಿಳಿಯುದಿಲ್ಲವೇ? ಅಪಘಾತಕ್ಕೆ ಈ ಸಂಬಂಧಪಟ್ಟ ಇಲಾಖೆ ಹೊಣೆ ಗಾರಿಕೆ ಅಲ್ಲವೇ? ಮತ್ತು ಇಲ್ಲಿ ರಸ್ತೆಯಲ್ಲಿ ಟ್ರಾಫಿಕ್ ಪೊಲೀಸ್ ನವರೂ ವಾಹನ ನಿಲ್ಲಿಸುವಾಗ ರಸ್ತೆಗೆ ಝೀಬ್ರಾ ಕ್ರಾಸ್ ಆಗಲಿ ವಾಹನಗಳು ಸಿಗ್ನೇಲ್ ಬೀಳುವಾಗ ರಸ್ತೆ ಡಾಟಾದಂತೆ ಇಲ್ಲೇ ನಿಲ್ಲುವ ಸೂಚನೆಗಳು ಕೂಡಾ ಇಲ್ಲಿ ಹಾಕಿಲ್ಲಾ ಯಾಕೆ? ಈ ಬಗ್ಗೆ ಕೂಡಲೇ ಸಂಬಂಧ ಪಟ್ಟ ಇಲಾಖೆ ಗಮನ ಹರಿಸಲಿ" ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.