ಬಂಟ್ವಾಳ, ಸೆ.29 (DaijiworldNews/TA): ಬದುಕಿನುದ್ದಕ್ಕೂ ಬಡತನ ಹಾಗೂ ಅನಾರೋಗ್ಯದಿಂದ ಬಳಲುತ್ತಿದ್ದ ಪಂಜೋಡಿ ನಿವಾಸಿ ಮಹಿಳೆಯೊಬ್ಬರು ಇತ್ತೀಚೆಗೆ ನಿಧನರಾದರು. ತೀರಾ ಬಡ ಕುಟುಂಬದವರಾಗಿದ್ದ ಅವರ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಲು ಓರ್ವ ಪುತ್ರಿಯೇ ದಿಕ್ಕಾಗಿದ್ದರೂ, ಆಕೆಗೆ ಅಂತ್ಯಸಂಸ್ಕಾರದ ವ್ಯವಸ್ಥೆ ಮಾಡುವುದು ಅಸಾಧ್ಯವಾಗಿತ್ತು.


ಈ ವಿಚಾರ ತಿಳಿದ ಸ್ಥಳೀಯರು ಮಾನವೀಯತೆ ಮೆರೆದಿದ್ದು, ಮಹಿಳೆಯ ಅಂತ್ಯಸಂಸ್ಕಾರಕ್ಕೆ ಅಗತ್ಯ ವ್ಯವಸ್ಥೆ ಕಲ್ಪಿಸಿದರು. ಮೂರ್ಜೆ ತುಂಗಪ್ಪ ಬಂಗೇರ ಅವರ ನೇತೃತ್ವದಲ್ಲಿ ಇರ್ವತ್ತೂರು ಪಂಚಾಯಿತಿ ಸ್ಮಶಾನದಲ್ಲಿ ಅಂತ್ಯಸಂಸ್ಕಾರಕ್ಕೆ ವ್ಯವಸ್ಥೆ ಮಾಡಲಾಯಿತು.
ಈ ಕಾರ್ಯಕ್ಕೆ ಶಂಕರ್ ಶೆಟ್ಟಿ ಬೆದ್ರಮಾರ್, ರವಿಶಂಕರ್ ಹೊಳ್ಳ, ಗುರುಪ್ರಸಾದ್ ಶೆಟ್ಟಿ, ಆನಂದ ಬಲ್ಲೆರೊಟ್ಟು, ಸಂಜೀವ ಪಂಜೋಡಿ, ಹರೀಶ್ ಪೂಜಾರಿ, ಶೇಖರ್ ಸಾಲ್ಯಾನ್ ಹಾಗೂ ಹೈದರ್ ಪಂಜೋಡಿ ಸಹಕಾರ ನೀಡಿದರು. ಅಲ್ಲದೆ, ಪುಂಜಾಲಕಟ್ಟೆಯ ನಝೀರ್ ಸಾಬ್ ಅವರು ಅಗತ್ಯವಾದ ಅಡಿಕೆ ಗಾರ್ಬಲ್ ವ್ಯವಸ್ಥೆ ಮಾಡಿ ನೆರವಾದರು.
ಬಡತನದಿಂದಾಗಿ ಅಂತಿಮ ವಿಧಿವಿಧಾನಗಳನ್ನೂ ನೆರವೇರಿಸಲು ಸಾಧ್ಯವಾಗದ ಕುಟುಂಬದ ಸಂಕಷ್ಟಕ್ಕೆ ಸ್ಪಂದಿಸಿದ ಸ್ಥಳೀಯರು, ಯಾವುದೇ ಜಾತಿ-ಧರ್ಮದ ಭೇದವಿಲ್ಲದೆ ಒಗ್ಗಟ್ಟಾಗಿ ನೆರವಾದರು. ಸಂಕಷ್ಟದಲ್ಲಿದ್ದ ಕುಟುಂಬದೊಂದಿಗೆ ನಿಂತು ಅಂತಿಮ ವಿಧಿವಿಧಾನಗಳನ್ನು ಗೌರವಯುತವಾಗಿ ನೆರವೇರಿಸುವ ಮೂಲಕ ಸ್ಥಳೀಯರು ಮಾನವೀಯತೆಗೆ ಮಾದರಿಯಾದರು.