ಮಂಗಳೂರು, ಸೆ 16 (Daijiworld News/RD): ಮತದಾರರ ಪಟ್ಟಿಯಲ್ಲಿ ಲೋಪದೋಷಗಳನ್ನು ಸರಿಪಡಿಸಲು ಸೆಪ್ಟೆಂಬರ್ 1 ರಿಂದ ಅಕ್ಟೋಬರ್ 15ರವರೆಗೆ ಅವಕಾಶ ನೀಡಲಾಗಿದ್ದು, ಮತದಾರರು ಇದರ ಸದುಪಯೋಗ ಪಡೆದುಕೊಳ್ಳುವಂತೆ ದ.ಕ. ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ತಿಳಿಸಿದ್ದಾರೆ.
ನಗರದ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕಳೆದ ಲೋಕಸಭಾ ಚುನಾವಣೆಯಲ್ಲಿ ಸಾರ್ವತ್ರಿಕ ಚುನಾವಣೆ ಸಂದರ್ಭದಲ್ಲಿ ಮತದಾರರ ಪಟ್ಟಿಯಲ್ಲಿ ಕಂಡುಬಂದ ಲೋಪದೋಷಗಳನ್ನು ಸರಿಪಡಿಸಲು ಅವಕಾಶ ಇದೆ. ಈಗಾಗಲೇ ಹೆಸರಿನಲ್ಲಿ ವ್ಯತ್ಯಾಸ, ಹೆಸರು, ನಾಪತ್ತೆ, ಮೃತರ ಹೆಸರು ಮತ್ತಿತರ ದೂರುಗಳು ಬರುತ್ತಿದ್ದು, ಈ ಹಿನ್ನೆಲೆಯಲ್ಲಿ ಮತದಾರರ ಪಟ್ಟಿಯ ದೋಷಗಳನ್ನು ಸರಿಪಡಿಸಿ ಮತದಾರರ ಭಾವಚಿತ್ರ ಹಾಗೂ ವಿವಿರಗಳನ್ನು ಸಮರ್ಪಕವಾಗಿ ನಮೂದಿಸುವ ಕಾರ್ಯವನ್ನು ಅಕ್ಟೋಬರ್ 15ರವರೆಗೆ ನಡೆಸುವಂತೆ ಚುನಾವಣಾ ಆಯೋಗ ಸರಿಪಡಿಸುವಂತೆ ಆದೇಶ ನೀಡಿದೆ ಎಂದು ಹೇಳಿದರು.
ಮತದಾರರು ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಸರಿಯಾಗಿದೆಯೇ ಎಂದು ಮತದಾರರ ಸಹಾಯವಾಣಿ, 1950ಗೆ ಕರೆ ಮಾಡಿ ತಿಳಿದುಕೊಳ್ಳಬಹುದು. www.nvsp.in ಮೂಲಕ, voter helpline App ಮೂಲಕ ಅಥವಾ ಮತಗಟ್ಟೆ ಅಧಿಕಾರಿಯನ್ನು ಭೇಟಿ ಮಾಡಿ ಪರಿಶೀಲಿಸಬಹುದು ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು. ಸುದ್ದಿಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ರೂಪಾ ಉಪಸ್ಥಿತರಿದ್ದರು.