ಕಾಪು, ಸೆ 16(DaijiworldNews/SM): ಕಾಪು ಬ್ಲಾಕ್ ಕಾಂಗ್ರೆಸ್ನ ದಕ್ಷಿಣ ಮತ್ತು ಉತ್ತರ ವಲಯ ಸಮಿತಿಗಳ ವತಿಯಿಂದ ಮಾಜಿ ಸಚಿವ ವಿನಯಕುಮಾರ್ ಸೊರಕೆ ಅವರ ನೇತೃತ್ವದಲ್ಲಿ ಸೋಮವಾರ ಕಾಪುವಿನಲ್ಲಿ ನಡೆದ ಬೃಹತ್ ಪ್ರತಿಭಟನಾ ಮೆರವಣಿಗೆ ಮತ್ತು ಸಭೆ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಐವನ್ ಡಿ ಸೋಜ, ರಾಜ್ಯದಲ್ಲಿ ಉಂಟಾದ ಪ್ರವಾಹ ಸಂತ್ರಸ್ತರು ಮತ್ತು ಬರಗಾಲ ಪೀಡಿತ ಪ್ರದೇಶಗಳನ್ನು ಕೇಂದ್ರ ಸರಕಾರ ಸಂಪೂರ್ಣ ಕಡೆಗಣಿಸಿದೆ. ಶ್ರೀಮಂತ ರಾಷ್ಟ್ರ ರಷ್ಯಾಕ್ಕೆ ಬಿಲಿಯನ್ ಮೊತ್ತದಲ್ಲಿ ಸಾಲ ನೀಡಲು ಮುಂದಾಗಿರುವ ಕೇಂದ್ರ ಸರಕಾರವು, ರಾಜ್ಯದ ಪ್ರವಾಹ ಪೀಡಿತ ಪ್ರದೇಶಗಳಿಗೆ ಕನಿಷ್ಟ ಮೊತ್ತದ ಸಹಾಯಧನವನ್ನೂ ಘೋಷಿಸದೇ ಇರುವುದು ನಮ್ಮೆಲ್ಲರ ದೌರ್ಭಾಗ್ಯವಾಗಿದೆ. ಈ ಮೂಲಕ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರದ ದಕ್ಷಿಣ ಭಾರತದ ರಾಜ್ಯಗಳ ಬಗೆಗಿನ ನಿರ್ಲಕ್ಷ ಧೋರಣೆ ಎದ್ದು ಕಾಣುತ್ತಿದೆ ಎಂದು ಆರೋಪಿಸಿದರು.
ಕೇಂದ್ರ ಸರಕಾರದ ಒಂದೇ ದೇಶ, ಒಂದೇ ಮತ, ಒಂದೇ ಭಾಷೆ ಎಂಬ ಕಲ್ಪನೆಯು ಆಘಾತಕಾರಿಯಾದ ನಿರ್ಧಾರವಾಗಿದ್ದು, ಯಾರೊಂದಿಗೂ ಚರ್ಚಿಸದೆ ಏಕಮುಖ ನಿರ್ಧಾರ ತೆಗೆದುಕೊಳ್ಳಲು ಕೇಂದ್ರ ಸರಕಾರ ಮುಂದಾಗಿರುವುದು ನಾಚಿಕೆಗೇಡಿನ ವಿಚಾರವಾಗಿದೆ. ದಕ್ಷಿಣ ಭಾರತದಲ್ಲಿ ಹತ್ತಾರು ಭಾಷೆಗಳಿದ್ದು, ಹತ್ತಾರು ಭಾಷೆಗಳನ್ನು ಅವಲಂಭಿತರಾಗಿರುವ ಕೋಟ್ಯಂತರ ಜನರಿದ್ದಾರೆ. ಹಿಂದಿ ಹೇರಿಕೆಯ ಮೂಲಕ ದಕ್ಷಿಣ ಭಾರತ ರಾಜ್ಯಗಳ ಭಾಷಾ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುವ ಪ್ರಯತ್ನ ನಡೆಯುತ್ತಿದೆ ಎಂದರು.
ಮಾಜಿ ಸಚಿವ ವಿನಯಕುಮಾರ್ ಸೊರಕೆ ಮಾತನಾಡಿ, ಜನ ಸಾಮಾನ್ಯರ ಮೇಲೆ ಹೊರೆಯಾಗುವಂತಹ ನೂತನ ವಾಹನ ಕಾಯ್ದೆಯನ್ನು ಜಾರಿಗೊಳಿಸಿ ಭಾರೀ ದಂಡ ವಸೂಲಿ ಮಾಡುತ್ತಿರುವ ಸರಕಾರದ ಜನವಿರೋಧಿ ಧೋರಣೆ ಖಂಡನೀಯವಾಗಿದೆ. ಮರಳುಗಾರಿಕೆಯ ಬಗ್ಗೆ ಭಾರೀ ಭರವಸೆ ನೀಡಿ ಅಧಿಕಾರಕ್ಕೆ ಬಂದಿರುವ ಕರಾವಳಿಯ ಸಂಸದರು ಮತ್ತು ಶಾಸಕರು ಜನರಿಗೆ ನೀಡಿದ ಆಶ್ವಾಸನೆಯನ್ನು ಈಡೇರಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಈ ಬಗ್ಗೆ ಜನಾಭಿಪ್ರಾಯ ಮೂಡಿಸುವ ನಿಟ್ಟಿನಲ್ಲಿ ಕೆಪಿಸಿಸಿ ನಿರ್ದೇಶನದಂತೆ ಈ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದರು.