ಮಂಗಳೂರು, ಸೆ.17(Daijiworld News/SS): ದಕ್ಷಿಣ ಕನ್ನಡ ಜಿಲ್ಲಾ ಕಿವುಡರ ಸಂಘದ ವಿಶೇಷ ಚೇತನ ಮಕ್ಕಳಿಗೆ ತಮ್ಮ ವೈಯಕ್ತಿಕ ನಿಧಿಯಿಂದ ಆರ್ಥಿಕ ಸಹಾಯ ನೀಡುವ ಮೂಲಕ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ಶಾಸಕ ಡಿ. ವೇದವ್ಯಾಸ ಕಾಮತ್ ಮಾನವೀಯತೆ ಮೆರೆದಿದ್ದಾರೆ.
ಸೆ.13-15ರವರೆಗೆ ಮಂಡ್ಯದಲ್ಲಿ ವಿಶೇಷ ಚೇತನ ಮಕ್ಕಳಿಗಾಗಿ (ಕಿವುಡ ಮತ್ತು ಮೂಗರು) ಕ್ರೀಡಾಕೂಟವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕ್ರೀಡಾಕೂಟದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಿವುಡರ ಸಂಘದ ಮಕ್ಕಳು ಭಾಗವಹಿಸಲು ನಿರ್ಧರಿಸಿದ್ದರು. ಆದರೆ, ವಿಶೇಷ ಚೇತನ ಮಕ್ಕಳಿಗೆ ಕ್ರೀಡಾಕೂಟದಲ್ಲಿ ಭಾಗವಹಿಸಲು ಆರ್ಥಿಕ ಸಮಸ್ಯೆ ಎದುರಾಗಿತ್ತು. ಈ ಹಿನ್ನಲೆಯಲ್ಲಿ, ಕಳೆದ ಕೆಲ ದಿನಗಳ ಹಿಂದೆ ದಕ್ಷಿಣ ಕನ್ನಡ ಜಿಲ್ಲಾ ಕಿವುಡರ ಸಂಘದ ಸುಮಾರು 15ಕ್ಕೂ ಹೆಚ್ಚು ಮಕ್ಕಳು ಮಂಡ್ಯದಲ್ಲಿ ನಡೆಯಲಿರುವ ಕ್ರೀಡಾಕೂಟದಲ್ಲಿ ಭಾಗವಹಿಸಲು ಆರ್ಥಿಕ ನೆರವು ಕೋರಿ ಶಾಸಕ ಕಾಮತ್ ಅವರಿಗೆ ಮನವಿಯನ್ನು ಮಾಡಿದ್ದರು.
ಮಂಗಳೂರಿನಲ್ಲಿ ಹಲವಾರು ಜನರ ಕಷ್ಟಗಳಿಗೆ ಸ್ಪಂದಿಸಿ, ಜನಪರ ನೋವಿಗೆ ಧ್ವನಿಯಾಗಿರುವ ನೀವು ನಮಗೆ ಧನ ಸಹಾಯ ಮಾಡಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಕಿವುಡರ ಸಂಘದ ವಿಶೇಷ ಚೇತನ ಮಕ್ಕಳು ಪತ್ರದಲ್ಲಿ ವಿನಂತಿಸಿಕೊಂಡಿದ್ದರು. ಈ ಮನವಿಗೆ ತಕ್ಷಣ ಸ್ಪಂದಿಸಿದ ಶಾಸಕ ಕಾಮತ್, ತಮ್ಮ ವೈಯಕ್ತಿಕ ನಿಧಿಯಿಂದ ಕ್ರೀಡಾಕೂಟದಲ್ಲಿ ಭಾಗವಹಿಸಲು ಮಕ್ಕಳಿಗೆ ಆರ್ಥಿಕ ಸಹಾಯವನ್ನಿತ್ತು, ಪ್ರೋತ್ಸಾಹಿಸಿದ್ದಾರೆ. ಈ ಮೂಲಕ ಡಿ. ವೇದವ್ಯಾಸ ಕಾಮತ್ ಸಮಾಜಕ್ಕೆ ಮಾದರಿಯಾಗಿದ್ದಾರೆ. ಮಾತ್ರವಲ್ಲ, ಶಾಸಕರ ಈ ಮಾನವೀಯ ಕಾರ್ಯಕ್ಕೆ ಮೆಚ್ಚುಗೆ ಕೂಡ ವ್ಯಕ್ತವಾಗಿದೆ.
ಇನ್ನು, ಮಂಡ್ಯದಲ್ಲಿ ಕ್ರಿಕೆಟ್ ಸೇರಿದಂತೆ ವಾಲಿಬಾಲ್, ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಭಾಗವಹಿಸಿದ ದಕ್ಷಿಣ ಕನ್ನಡ ಜಿಲ್ಲಾ ಕಿವುಡರ ಸಂಘದ ವಿಶೇಷ ಚೇತನ ಮಕ್ಕಳು ರಾಜ್ಯಕ್ಕೇ ಪ್ರಥಮ, ದ್ವೀತಿಯ ಸ್ಥಾನಗಳನ್ನು ಗೆಲ್ಲುವುದರ ಮೂಲಕ ಕರಾವಳಿಗೆ ಕೀರ್ತಿಯನ್ನು ತಂದಿದ್ದಾರೆ. ವಿಶೇಷವೆಂದರೆ, ಮಕ್ಕಳು ಮಂಡ್ಯದಲ್ಲಿ ಸ್ಪರ್ಧೆಯಲ್ಲಿ ಭಾಗವಹಿಸಿ ಗೆದ್ದ ಬಳಿಕ ಮೊದಲು ಶಾಸಕ ಕಾಮತ್ ಅವರ ಕಚೇರಿಗೆ ತೆರಳಿ, ಅವರಿಗೆ ಧನ್ಯವಾದ ತಿಳಿಸಿ ಸಂಭ್ರಮಿಸಿದ್ದಾರೆ.