ಉಡುಪಿ,ಸೆ 17 (Daijiworld News/RD): ಭಾಗಶಃ ನೆಲಕ್ಕೊರಗಿರೋ ಮನೆಗಳು, ಟಾರ್ಪಲ್- ತುಕ್ಕು ಹಿಡಿದ ತಗಡು ಶೀಟುಗಳ ಪುಟ್ಟ ಕುಟೀರದಲ್ಲೇ ಹತ್ತಾರು ಸಂಸಾರ, ಹಾವು - ಚೇಳು- ಸೊಳ್ಳೆಗಳ ಕಾಟ. ದಿನ ಬೆಳಗಾದರೆ ಹರಿದುಬರೋ ತ್ಯಾಜ್ಯ ದ ಓಣಿಯ ದಂಡೆಗೆ ತಾಗಿ ನೆಲೆಸಿರೋ ಮೂಲ ನಿವಾಸಿಗಳ ಬದುಕು ಅಕ್ಷರಶಃ ಅತಂತ್ರವಾಗಿದೆ.
ಒಪ್ಪತ್ತು ಕೂಡಾ ನೆಮ್ಮದಿಯಾಗಿ ಉಣ್ಣಲಾಗದ ಅವಸ್ಥೆ. ಇದು ಕುಂದಾಪುರ ತಾಲೂಕು ಅಂಬೇಡ್ಕರ್ ನಗರ ಕೊರಗರ ಕಾಲೋನಿಯ ದುಸ್ಥಿತಿ. ಶತಮಾನಗಳಿಂದ ತಮ್ಮದೇ ಸಂಸ್ಕ್ರತಿ ಆಚಾರ ವಿಚಾರಗಳಿಂದ ಗಮನ ಸೆಳೆಯುತ್ತಿರೋ ಕುಂದಾಪುರ ಅಂಬೇಡ್ಕರ್ ಕಾಲೋನಿಯ ಕೊರಗರ ಬದುಕು ಮೂರಾಬಟ್ಟೆಯಾಗಿದೆ.
ಸ್ವಚ್ಚತೆ ವಿಷಯದಲ್ಲಿ ಹಲವು ಬಾರಿ ಪ್ರಶಸ್ತಿ ಬಾಚಿಕೊಂಡಿರೋ ಕುಂದಾಪುರ ನಗರ ಸಭೆ ವ್ಯಾಪ್ತಿಯಲ್ಲಿ ದುಡಿಯೋ ಪೌರ ಕಾರ್ಮಿಕರ ಪರಿಸ್ಥಿತಿ ಇದು. ಊರಿಗೆ ಊರನ್ನೇ ಸ್ವಚ್ಛ ಮಾಡುವವರ ಬದುಕಿನ ಕಥೆ ಇದು. ನಾಲ್ಕು ವರ್ಷಗಳ ಹಿಂದೆ ಇವರಿಗೆಲ್ಲ ಅಂಬೇಡ್ಕರ್ ವಸತಿ ಯೋಜನೆಯಡಿ ಮನೆ ನಿರ್ಮಾಣ ಕ್ಕೆ ಅನುದಾನ ಬಿಡುಗಡೆಯಾಗಿದ್ದು, ಆ ಅನುದಾನ ಮಾತ್ರ ಅರೆಕಾಸಿನ ಮಜ್ಜಿಗೆಯಾಗಿದ್ದು ಮೂಲನಿವಾಸಿಗಳ ಬದುಕು ಬೀದಿಗೆ ಬಿದ್ದಿದೆ.
88 ಸೆಂಟ್ಸ್ ಜಾಗದಲ್ಲಿ ಸುಮಾರು ಮೂವತ್ತು ಕುಟುಂಬಗಳಿಗೆ ಅಂಬೇಡ್ಕರ್ ವಸತಿ ಯೋಜನೆಯಡಿ ಅನುದಾನ ಬಿಡುಗಡೆಗೊಂಡು ಮನೆ ನಿರ್ಮಾಣ ಕಾರ್ಯ 4 ವರ್ಷದ ಹಿಂದೇನೇ ಆರಂಭಗೊಂಡಿತ್ತು. ಇದ್ದಕಿದ್ದಂತೆ ಸರಕಾರದ ನಿಷ್ಕ್ರಿಯತೆ ಮತ್ತು ಅತಂತ್ರತೆಯಿಂದ ಉಳಿದ ಅನುದಾನ ಬಿಡುಗಡೆಯಾಗದೇ ಮನೆ ನಿರ್ಮಾಣ ಕಾರ್ಯ ಅರ್ಧಕ್ಕೆ ನಿಂತು ಹೋಗಿದೆ. ಕಾಲೋನಿ ಕೆಲವು ಕುಟುಂಬಕ್ಕೆ ಅನುದಾನ ಬಿಡುಗಡೆಯ ಪತ್ರ ಮಾತ್ರ ಸಿಕ್ಕಿದ್ದು ಹಣ ಬಿಡುಗಡೆಯಾಗಿಲ್ಲ. ಕೆಲವರಿಗೆ ಇನ್ನು ಹಕ್ಕುಪತ್ರನೇ ಸಿಕ್ಕಿಲ್ಲ. ಇಲಿ , ಹೆಗ್ಗಣ, ಚೇಳುಗಳ ನಡುವೆನೇ ಮಕ್ಕಳೊಂದಿಗೆ ಜೋಪಡಿಯಲ್ಲಿ ಬದುಕು ಸಾಗಿಸೋ ದುಸ್ಥಿತಿ ಇವರಿಗೊದಗಿದೆ.
ನೂರಾರು ವರ್ಷ ಇಲ್ಲೇ ಬದುಕು ಕಟ್ಟಿಕೊಂಡು ನಗರದ ಸ್ವಚ್ಚತೆಗಾಗಿ ದುಡಿಯೋ ಪೌರ ಕಾರ್ಮಿಕರಿಗೆ ಈ ಪರಿಸ್ಥಿತಿ ಒದಗಿದ್ದು ನಿಜಕ್ಕೂ ಆಡಳಿತ ವ್ಯವಸ್ಥೆ ಗೆ ಹಿಡಿದಿರೋ ಕನ್ನಡಿಯಾಗಿದೆ. ಕೊರಗರ ಅಭಿವ್ರದ್ಧಿ ಗಾಗಿ ಬರೋ ಅನುದಾನ ಯಾರ ಕೈ ಸೇರುತ್ತಿದೆ ಅನ್ನೋ ಅನುಮಾನ ಸಮುದಾಯದ ಮಂದಿಯನ್ನು ಕಾಡ್ತಾ ಇದ್ದು ಬದುಕಿಗಾಗಿ ಹೋರಾಟ ಅನಿವಾರ್ಯವಾಗಿದೆ.