ಚಿಕ್ಕಬಳ್ಳಾಪುರ, ಡಿ 29: ಕುಮಾರಸ್ವಾಮಿ ಮತ್ತು ಯಡಿಯೂರಪ್ಪ ಮುಂಬರುವ ವಿಧಾಸಭಾ ಚುನಾವಣೆಯಲ್ಲಿ ಅವರಪ್ಪನಾಣೆಗೂ ಮುಖ್ಯಮಂತ್ರಿ ಆಗುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಬಾಗೇಪಲ್ಲಿಯಲ್ಲಿ ಆಯೋಜಿಸಿದ್ದ ನುಡಿದಂತೆ ನಡೆದಿದ್ದೇವೆ–ಸಾಧನಾ ಸಂಭ್ರಮ ಕಾರ್ಯಕ್ರಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು. ಕುಮಾರಸ್ವಾಮಿ ಮುಖ್ಯಮಂತ್ರಿಯಾದರೆ ಬಯಲು ಪ್ರದೇಶಗಳಿಗೆ ನೀರು ಒದಗಿಸುವ ಎತ್ತಿನಹೊಳೆ ಯೋಜನೆಯನ್ನು ರದ್ದು ಮಾಡುವುದಾಗಿ ಹೇಳುತ್ತಾರೆ. ಆದರೆ ಯೋಜನೆಯನ್ನು ನಿಲ್ಲಿಸಲು ಅವರಿಂದ ಸಾಧ್ಯವಿಲ್ಲ ಎಂದರು.
ಮಹಾದಾಯಿ ವಿಚಾರದಲ್ಲಿ ಬಿಜೆಪಿಯವರು ನಾಟಕ ಮಾಡುತ್ತಿದ್ದಾರೆ. ಬಿಜೆಪಿಯವರಿಗೆ ಮಹಾದಾಯಿ ವಿಚಾರದಲ್ಲಿ ಕಾಳಜಿ ಇದ್ದರೆ ನ್ಯಾಯಮಂಡಳಿಯಲ್ಲಿ ನಾವು ನೀರು ಕೊಡುತ್ತೇವೆ ಎಂದು ಪ್ರಮಾಣಪತ್ರ ಸಲ್ಲಿಸಲಿ. ಮಹಾದಾಯಿ ವಿಚಾರದಲ್ಲಿ ಯಡಿಯೂರಪ್ಪ ಡಿ.15ರ ಒಳಗೆ ಸಮಸ್ಯೆ ಇತ್ಯರ್ಥ ಮಾಡುವುದಾಗಿ ಭರವಸೆ ನೀಡಿ ಮಾತು ತಪ್ಪಿದ್ದಾರೆ. ಬಿಜೆಪಿಯವರಿಗೆ ಹೊರಗೊಂದು, ಒಳಗೊಂದು ಎರಡು ನಾಲಿಗೆ, ಎರಡು ಮುಖಗಳಿವೆ ಎಂದು ಹೇಳಿದರು.