ಉಳ್ಳಾಲ, ಸೆ 18 (Daijiworld News/MSP): ಹದಗೆಟ್ಟ ರಸ್ತೆ ವಿಚಾರಕ್ಕೆ ಸಂಬಂಧಿಸಿ ಉಳ್ಳಾಲ ನಗರಸಭೆ ವ್ಯಾಪ್ತಿಯ ಕಲ್ಲಾಪು ವಾರ್ಡಿನಲ್ಲಿ ಮಾಜಿ ನಗರಸಭೆ ಸದಸ್ಯ ಹಾಗೂ ಹಾಲಿ ಸದಸ್ಯರುಗಳ ನಡುವೆ ಹೊಡೆದಾಟ ನಡೆದಿರುವ ಘಟನೆ ಬುಧವಾರ ಬೆಳಿಗ್ಗೆ ನಡೆದಿದೆ.
ರಾ.ಹೆ.66 ರಿಂದ ಕಲ್ಲಾಪು ಪಟ್ಲ ಸಂಪರ್ಕಿಸುವ ರಸ್ತೆ ಕೆಸರುಮಯವಾಗಿದೆ. ಅಲ್ಲದೆ ತೀವ್ರವಾಗಿ ಹದಗೆಟ್ಟ ಹಿನ್ನೆಲೆಯಲ್ಲಿ ಜನರಿಗೆ ನಡೆದುಕೊಂಡು ಹೋಗಲು ಅಸಾಧ್ಯವಾಗಿದೆ. ಈ ಕುರಿತು ನಗರಸಭೆ ಸದಸ್ಯರುಗಳಾದ ಮುಸ್ತಾಕ್ ಪಟ್ಲ ಹಾಗೂ ದಿನಕರ್ ಉಳ್ಳಾಲ್ ಅವರುಗಳ ಮನವಿಯ ಮೇರೆಗೆ ಉಳ್ಳಾಲ ನಗರಸಭೆಯಿಂದ ಬುಧವಾರ ದುರಸ್ತಿ ಕಾರ್ಯ ಕೈಗೊಳ್ಳಲಾಗಿತ್ತು. ಇದನ್ನು ಉಳ್ಳಾಲ ನಗರಸಭೆ ಮಾಜಿ ಸದಸ್ಯ ಉಸ್ಮಾನ್ ಕಲ್ಲಾಪು ಮತ್ತು ತಂಡ ಅಡ್ಡಿಪಡಿಸಿತ್ತು.
ಅಲ್ಲದೆ ಖಾಸಗಿ ಲಾರಿಯ ಮೂಲಕ ತಾವೇ ದುರಸ್ತಿ ಕಾರ್ಯ ಕೈಗೊಳ್ಳುವುದಾಗಿ ಹೇಳಿ ವಾಗ್ವಾದಕ್ಕೆ ಇಳಿದಿತ್ತು. ಈ ನಡುವೆ ಇತ್ತಂಡಗಳ ನಡುವೆ ವಾಗ್ವಾದ ನಡೆದು ಉಸ್ಮಾನ್ ಕಲ್ಲಾಪು ಮತ್ತು ತಂಡ ಓರ್ವನನ್ನು ದೂಡಿಹಾಕುತ್ತಿರುವ ವೀಡಿಯೋ ಸೆರೆಯಾಗಿದೆ. ಅಲ್ಲದೆ ಘಟನೆ ಬಳಿಕ ನಗರಸಭೆ ಮಾಜಿ ಸದಸ್ಯ ಉಸ್ಮಾನ್ ಕಲ್ಲಾಪು ಮತ್ತು ಸಹೋದರ ಜಲೀಲ್ ಸೇರಿಕೊಂಡು ಹಾಲಿ ಸದಸ್ಯ ಮುಸ್ತಾಕ್ ಪಟ್ಲ ಮೇಲೆ ಹಲ್ಲೆ ನಡೆಸಿದ್ದಾನೆಂದು ಆರೋಪಿಸಲಾಗಿದೆ. ರಸ್ತೆಯಲ್ಲಿ ನೇತ್ರಾವತಿ ನದಿ ದಡದಿಂದ ಮರಳು ಕೊಂಡೊಯ್ಯುವ ಲಾರಿಗಳು ರಾತ್ರಿಯಿಡೀ ವ್ಯಾಪಕವಾಗಿ ತಿರುಗಾಡುತ್ತಿದೆ. ಅದರ ವಿರುದ್ಧ ಮಾತನಾಡಿದವರಿಗೆ ಕೊಲೆಬೆದರಿಕೆ ಹಾಕಲಾಗುತ್ತಿದೆ. ಇದರಿಂದಲೇ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದೆ. ಅವರಿಗೆ ಬೆಂಬಲವಾಗಿ ನಿಂತಿರುವ ಮಾಜಿ ಸದಸ್ಯ ಉಸ್ಮಾನ್ ಅವರ ಕೈಯಿಂದಲೇ ರಸ್ತೆ ರಿಪೇರಿ ಮಾಡಿಸುತ್ತಿದ್ದಾರೆಂದು ಆರೋಪಿಸಲಾಗುತ್ತಿದೆ. ತಿಂಗಳ ಹಿಂದೆಯಷ್ಟೇ ಜಲೀಲ್ ಎಂಬಾತ ನಗರಸಭೆ ಸದಸ್ಯ ಮುಸ್ತಾಕ್ ಪಟ್ಲ ಅವರಿಗೆ ಹಲ್ಲೆ ನಡೆಸಿರುವ ಕುರಿತು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಘಟನೆಯಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಉಳ್ಳಾಲ ಪೊಲೀಸರು ಬಂದೋಬಸ್ತ್ ಏರ್ಪಡಿಸಿದ್ದಾರೆ.