ಪುತ್ತೂರು, ಸೆ 18 (Daijiworld News/MSP): ಪುತ್ತೂರಿನಲ್ಲಿ ಆಗಸ್ಟ್ 31 ರಂದು ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಆಯೋಜಿಸಲಾಗಿದ್ದ ಮೊಸರು ಕುಡಿಕೆ ಉತ್ಸವದ ಸಭಾ ಕಾರ್ಯಕ್ರಮದಲ್ಲಿ ಬಜರಂಗದಳ ಕರ್ನಾಟಕ ದಕ್ಷಿಣ ಪ್ರಾಂತ್ಯ ಸಹ ಸಂಯೋಜಕ ರಘು ಸಕಲೇಶಪುರ ಅವರು ಕೋಮುಪ್ರಚೋದಕ ಭಾಷಣ ಮಾಡಿದ್ದಾರೆ ಎಂದು ಆಪಾದಿಸಿ ನೀಡಿದ ದೂರಿನಂತೆ ರಘು ಸೇರಿ ಮೂವರ ವಿರುದ್ಧ ಪುತ್ತೂರು ನಗರ ಠಾಣೆಯಲ್ಲಿ ಕೇಸು ದಾಖಲಾಗಿದೆ.
ಪಾಪುಲರ್ ಫ್ರಂಟ್ ಆಫ್ ಇಂಡಿಯಾ ಪುತ್ತೂರು ನಗರ ಸಮಿತಿ ಸದಸ್ಯರಾದ ಸಿರಾಜುದ್ದೀನ್ ಎಂಬವರು ನೀಡಿದ ದೂರಿನಂತೆ, ರಘು ಸಕಲೇಶಪುರ ಮೊಸರುಕುಡಿಕೆ ಉತ್ಸವ ಸಮಿತಿ ಅಧ್ಯಕ್ಷ ಕಡಮಜಲು ಸುಭಾಷ್ ರೈ, ಹಾಗೂ ವಿಹಿಂಪ ಅಧ್ಯಕ್ಷ ಜನಾರ್ದನ ಬೆಟ್ಟ ಅವರ ವಿರುದ್ದ ಪ್ರಕರಣ ದಾಖಲಿಸಲಾಗಿದೆ. ರಘು ಸಕಲೇಶಪುರ ಅವರು ಭಾಷಣದ ವೇಳೆಯಲ್ಲಿ ಭಾರತ ಮಾತಾಕಿ ಜೈ,ಜೈ ಶ್ರೀ ರಾಮ ಎಂದು ಮುಸ್ಲಿಮರು ಹೇಳದಿದ್ದಲ್ಲಿ ದೇಶದ ಯಾವುದೇ ಮೂಲೆಯಲ್ಲಿ ಕೂಡ ಮುಸ್ಲಿಮರಿಗೆ ನಮಾಝ್ ನಿರ್ವಹಿಸಲು ಒಂದು ಅಡಿ ಜಾಗವನ್ನು ನೀಡಲಾಗುವುದಿಲ್ಲ ಎಂದು ಹೇಳಿದ್ದಾರೆ. ಹಿಂದೂ ಮತ್ತು ಮುಸ್ಲಿಮರ ನಡುವೆ ವೈಷಮ್ಯವನ್ನು ಹುಟ್ಟುಹಾಕಿ ಕೋಮುಗಲಭೆಯನ್ನು ಮಾಡಬೇಕೆಂಬ ಉದ್ದೇಶದಿಂದ ಈ ಹೇಳಿಕೆ ನೀಡಿದ್ದಾರೆ ಮತ್ತು ಮುಸ್ಲಿಮರ ಭಾವನೆಗಳನ್ನು ಕೆರಳಿಸುವಂತೆ ಕೆಲಸ ಮಾಡಿದ್ದಾರೆ ಎಂದು ಸಿರಾಜುದ್ದೀನ್ ನಗರ ಠಾಣೆಗೆ ದೂರು ನೀಡಿದ್ದರು.
ಭಾಷಣದಲ್ಲಿ ಕೋಮು ಪ್ರಚೋದನಕಾರಿ ಅಂಶಗಳಿವೆ ಸಮಾಜದಲ್ಲಿ ಶಾಂತಿಭಂಗ ಮತ್ತು ಕೋಮು ಸೌಹಾರ್ದತೆಗೆ ಧಕ್ಕೆ ತರುವ ಅಂಶಗಳಿವೆ ಎಂಬ ಬಗ್ಗೆ ಕಾನೂನು ತಜ್ಞರ ಮೂಲಕ ಅವಲೋಕನ ನಡೆಸಿದ ಬಳಿಕ ಭಾರತೀಯ ದಂಡ ಸಂಹಿತೆ ಕಲಂ ಪ್ರಕಾರ ಕೇಸು ದಾಖಲಿಸಿಕೊಳ್ಳಲಾಗಿದೆ.