ಕುಂದಾಪುರ, ಸೆ 18 (Daijiworld News/MSP): ಕೊಲ್ಲೂರು ಸಮೀಪದ ದಳಿ ಎಂಬಲ್ಲಿ ಮಾದಿಬರೆ ಮೀಸಲು ಅರಣ್ಯ ಪ್ರದೇಶದಲ್ಲಿ ಅಪರಿಚಿತ ಅಕ್ರಮ ನೀಲಿ ಟೆಂಟ್ ಪತ್ತೆಯಾಗಿದ್ದು, ಸ್ಥಳೀಯ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿತ್ತು. ನೀಲಿ ಟೆಂಟ್ ಹಾಕಲಾಗಿರುವುದನ್ನು ಸ್ತಳೀಯವಾಸಿಗಳು ಪತ್ತೆ ಮಾಡಿದ್ದು, ಅರಣ್ಯ ಇಲಾಖಾ ಅಧಿಕಾರಿಯವರಿಗೆ ತಿಳಿಸಿದ್ದಾರೆ. ಮಾಹಿತಿ ಪಡೆದ ಅಧಿಕಾರಿಗಳು ಕೊಲ್ಲೂರು ಪೊಲಿಸ್ ಠಾಣೆಗೆ ದೂರು ನೀಡಿದ್ದರು.
ದೂರು ಆಧರಿಸಿದ ಕೊಲ್ಲೂರು ಪೊಲೀಸರು ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿ, ಹೆಬ್ರಿ ಎಎನ್ಎಫ್ ಕ್ಯಾಂಪಿನ ಡಿವೈಎಸ್ಪಿ ಗಣೇಶ್ ಎಂ. ಹೆಗ್ಡೆ ಹಾಗೂ ಎಎನ್ಎಫ್ ತಂಡದೊಂದಿಗೆ ಸ್ಥಳೀಯ ಪೊಲೀಸ್ ಅಧಿಕಾರಿಗಳು ಮತ್ತು ಸ್ಥಳೀಯ ಅರಣ್ಯಾಧಿಕಾರಿಗಳೊಂದಿಗೆ ಸಭೆ ನಡೆಸಿ, ಟೆಂಟ್ ಇರುವ ಸ್ಥಳದ ಪರಿಶೀಲನೆ ನಡೆಸಿ, ಸುತ್ತಲಿನ ಸ್ಥಳದಲ್ಲಿ ಕೂಂಬಿಂಗ್ ಕಾರ್ಯಾಚರಣೆ ನಡೆಸಿದ್ದಾರೆ. ಈ ಸಂದರ್ಭ ನೀಲಿ ಬಣ್ಣದ ಟಾರ್ಪಾಲ್ನಿಂದ ಒಂದು ತಾತ್ಕಾಲಿಕ ಟೆಂಡನ್ನು ನಿರ್ಮಿಸಿದ್ದು ಕಂಡುಬಂದಿದ್ದು, ಟೆಂಟಿನ ಒಳಗಡೆ ಅಡುಗೆ ಸಾಮಾಗ್ರಿಗಳು, ಸಣ್ಣ ಕುಂಕುಮದ ಕರಡಿಗೆ, ವಿಭೂತಿ ಇರುವ ಸಣ್ಣ ಪ್ಲಾಸ್ಟಿಕ್ ಕರಡಿಗೆ, ಚಪ್ಪಲಿ, ಚಹಾ ಮಾಡಲು ಬಳಸುವ ಅಲ್ಯುಮಿನಿಯಂ ಪಾತ್ರೆ, ಸ್ವಿಚ್ ಕೊಡೆ, ಎರಡು ಪ್ಯಾಕ್ ಬನ್, ಬಿಳಿ ಬಣ್ಣದ ರೇಷ್ಮೆ ಪಂಚೆ ಮತ್ತು ಬಿಳಿ ಬಣ್ಣದ ಟೆರಿಕೋಟ್ ಜುಬ್ಬಾ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಳೆದ ಕೆಲವು ವರ್ಷಗಳ ಹಿಂದೆ ದೇವರಬಾಳು ಎಂಬಲ್ಲಿ ನಕ್ಸಲ್ ಕಾರ್ಯಾಚರಣೆ ನಡೆಯುತ್ತಿದ್ದು, ಓರ್ವ ನಕ್ಸಲನನ್ನು ಎನ್ಕೌಂಟರ್ ಮೂಲಕ ಹತ್ಯೆ ಮಾಡಲಾಗಿತ್ತು. ಇದಾದ ಬಳಿಕ ನಕ್ಸಲ್ ಕಾರ್ಯಾಚರಣೆ ಕಂಡು ಬಂದಿರಲಿಲ್ಲ. ಆದರೆ ಕೊಲ್ಲೂರು ಮೀಸಲು ಅರಣ್ಯ ಪ್ರದೇಶಲ್ಲಿ ನೀಲಿ ಟೆಂಟ್ ಪತ್ತೆಯಾಗುವ ಮೂಲಕ ಜಿಲ್ಲೆಯಲ್ಲಿ ನಕ್ಸಲರಿರುವ ಶಂಕೆ ವ್ಯಕ್ತವಾಗಿತ್ತು.
ಆತಂಕ ಬೇಡ : ಮೀಸಲು ಅರಣ್ಯ ಪ್ರದೇಶದಲ್ಲಿ ಪತ್ತೆಯಾದ ಟೆಂಟಿಗೂ ನಕ್ಸಲರಿಗೆ ಸಂಬಂಧವಿಲ್ಲ ಎಂದು ಪೊಲೀಸ್ ಇಲಾಖೆ ಸ್ಪಷ್ಟಪಡಿಸಿದೆ. ಟೆಂಟ್ ಹಾಕಿದ ಸ್ಥಳವು ಜನವಸತಿ ಪ್ರದೇಶಕ್ಕೆ ತೀರಾ ಸಮೀಪದಲ್ಲಿದ್ದು, ಜನರು ಸೊಪ್ಪು, ಉರುವಲು ಕಟ್ಟಿಗೆ ಸಂಗ್ರಹಿಸಲು ಮತ್ತು ದನ ಮೇಯಲು ಓಡಾಡುವ ಅರಣ್ಯ ಪ್ರದೇಶವಾಗಿರುತ್ತದೆ. ಅಲ್ಲದೇ ಪ್ರವಾಸಿಗರು ಚಾರಣಕ್ಕೆ ಮತ್ತು ಇಲ್ಲಿಂದ ಸುಮಾರು ೪ ಕಿ.ಮೀ. ದೂರದಲ್ಲಿರುವ ಅರಸಿನಗುಂಡಿ ಜಲಪಾತಕ್ಕೆ ಹೋಗುವ ದಾರಿಯ ಸಮೀಪದಲ್ಲಿರುತ್ತದೆ. ಸದ್ರಿ ಸ್ಥಳವು ಧ್ಯಾನಕ್ಕೆ ಪ್ರಶಸ್ತ ಸ್ಥಳವಾಗಿದ್ದರಿಂದ, ಕೇರಳ ಹಾಗೂ ಬೇರೆ ರಾಜ್ಯದಿಂದ ಬರುವ ಆಧ್ಯಾತ್ಮಿಕ ಒಲವುಳ್ಳ ಯಾತ್ರಾರ್ಥಿಗಳು ಸದರಿ ಅರಣ್ಯ ಪ್ರದೇಶದಲ್ಲಿ ತಿರುಗಾಡಿಕೊಂಡು ಧ್ಯಾನಕ್ಕಾಗಿ ಬಂದು ಹೋಗುವುದು ತಿಳಿದು ಬಂದಿದೆ ಎಂದು ಪೊಲೀಸ್ ಇಲಾಖೆಯ ಪ್ರಕಟಣೆ ತಿಳಿಸಿದೆ. ಅಲ್ಲದೇ ಪತ್ತೆಯಾದ ಟೆಂಟಿನ ರಚನೆ, ಗಾತ್ರ ಹಾಗೂ ಈ ಹಿಂದಿನ ಪ್ರಕರಣಗಳನ್ನು ಪರಾಂಭರಿಸಿದಾಗ ಹೋಲಿಕೆ ಆಗದೇ ಇದ್ದು ಅಲ್ಲಿ ಸಿಕ್ಕಂತಹ ವಸ್ತುಗಳೂ ಸಹ ನಕ್ಸಲರು ಸಾಮಾನ್ಯವಾಗಿ ಉಪಯೋಗಿಸುವ ವಸ್ತುಗಳಲ್ಲವೆಂದು ಕಂಡುಬಂದಿದ್ದು, ಆಧ್ಯಾತ್ಮಿಕ ಒಲವು ಇರುವ ವ್ಯಕ್ತಿಗಳು ಬಂದುಹೋಗಿರುವ ಸಾಧ್ಯತೆ ಇರುತ್ತದೆ. ಕೊಲ್ಲೂರು ಠಾಣಾ ವ್ಯಾಪ್ತಿಯಲ್ಲಿ ೨೦೦೮ರ ನಂತರ ನಕ್ಸಲ್ ಸಂಬಂಧಿ ಯಾವುದೇ ಚಟುವಟಿಕೆಗಳು ಕಂಡು ಬಂದಿರುವುದಿಲ್ಲ. ಆದಾಗ್ಯೂ ಮೇಲಿನ ಘಟನೆಯನ್ನು ಗಣನೆಗೆ ತೆಗೆದುಕೊಂಡು ಹೆಚ್ಚಿನ ನಿಗಾ ಇರಿಸಲಾಗಿದೆ ಎಂದು ಇಲಾಖೆ ಹೇಳಿದೆ.