ಕಾಪು, ಸೆ 18 (DaijiworldNews/SM): ಐಷಾರಾಮಿ ಕಾರಿನಲ್ಲಿ ಬಂದು ಇನ್ನೂರು ರೂಪಾಯಿ ಮೌಲ್ಯದ ನಕಲಿ ನೋಟ್ನ್ನು ಚಲಾಯಿಸಿದ ದಾವಣಗೆರೆ ಮೂಲದ ಯುವಕ ಮತ್ತು ಯುವತಿಯನ್ನು ಪೊಲೀಸರು ಸ್ಥಳೀಯರ ಸಹಕಾರದೊಂದಿಗೆ ಬುಧವಾರ ಕಾಪುವಿನಲ್ಲಿ ವಶಕ್ಕೆ ಪಡೆದುಕೊಂಡಿದ್ದಾರೆ.
ಬೆಂಗಳೂರು ನೋಂದಾವಣೆಯ ಕಾರಿನಲ್ಲಿ ದಾವಣಗೆರೆಯಿಂದ ಮಂಗಳೂರಿಗೆ ಬ್ರೀಜಾ ಕಾರ್ನಲ್ಲಿ ತೆರಳುತ್ತಿದ್ದ ಯುವ ಜೋಡಿಯೊಂದು ಲೆಮಿನಾ ಕ್ರಾಸ್ನ ಅಂಗಡಿಗೆ ತೆರಳಿ ಝೆರಾಕ್ಸ್ ನೋಟ್ನ್ನು ನೀಡಿ ತಿಂಡಿ ಪೊಟ್ಟಣ ಪಡೆದಿದ್ದರು. ಅದೇ ರೀತಿಯಲ್ಲಿ ನಿಟ್ಟೆಯಿಂದ ಬೆಳ್ಮಣ್ ವರೆಗಿನ ಹಲವು ಅಂಗಡಿಗಳಲ್ಲಿ ನೋಟನ್ನು ಚಲಾವಣೆ ಮಾಡಿದ್ದರು.
ಕಾರ್ಕಳ ನಿಟ್ಟೆ ಲಿಮಿನಾ ಕ್ರಾಸ್ ಬಳಿ ಜನರಲ್ ಸ್ಟೋರ್ವೊಂದಕ್ಕೆ ಬಂದ ಜೋಡಿ 200 ರೂಪಾಯಿ ನೀಡಿ ಅಗತ್ಯ ವಸ್ತುಗಳನ್ನು ಪಡೆದು ತೆರಳಿದ ಸಂದರ್ಭ ಅನುಮಾನಗೊಂಡ ಅಂಗಡಿಯವರು ಜಿಪಂ ಮಾಜಿ ಸದಸ್ಯ ಸುಪ್ರೀತ್ ಶೆಟ್ಟಿಯವರ ಗಮನಕ್ಕೆ ತಂದಿದ್ದಾರೆ. ಅದರಂತೆ ಅವರನ್ನು ಹಿಂಬಾಲಿಸಿದ ಅವರು ಮೆಡಿಕಲ್ನಲ್ಲಿ ನೀಡಿದ್ದ 200ರ ನೋಟ್ನ್ನು ಬ್ಯಾಂಕ್ನಲ್ಲಿ ಪರಿಶೀಲಿಸಿದಾಗ ನಕಲಿ ಎಂದು ಬೆಳಕಿಗೆ ಬಂದಿತ್ತು.
ಈ ಮಾಹಿತಿ ಪಡೆಯುತ್ತಲೇ ಸುಪ್ರೀತ್ ಶೆಟ್ಟಿ ಕೆದಿಂಜೆ ನೇತೃತ್ವದ ಯುವಕರ ತಂಡ ಯುವ ಜೋಡಿ ಬಂದಿದ್ದ ಬ್ರೀಜಾ ಕಾರನ್ನು ಬೆನ್ನಟ್ಟಿ ಬಂದಿದ್ದು, ಈ ಬಗ್ಗೆ ಪಡುಬಿದ್ರಿ ಪೊಲೀಸರಿಗೂ ಮಾಹಿತಿ ನೀಡಿದ್ದರು. ಪಡುಬಿದ್ರಿಯಲ್ಲಿ ಪೊಲೀಸರನ್ನು ಕಂಡ ಯುವ ಜೋಡಿ ವಾಹನವನ್ನು ಹೆಜಮಾಡಿಯತ್ತ ಕೊಂಡೊಯ್ದಿದ್ದು, ಅಲ್ಲಿ ಡೈವರ್ಷನ್ ತೆಗೆದುಕೊಂಡು ಕಾಪುವಿನತ್ತ ತೆರಳಿತ್ತು.
ಪಡುಬಿದ್ರಿ ಪೊಲೀಸರು ಈ ಬಗ್ಗೆ ಕಾಪು ಪೊಲೀಸರಿಗೆ ಮಾಹಿತಿ ನೀಡಿದ್ದು, ಕಾಪು ಹೆದ್ದಾರಿಯಲ್ಲಿ ಬಂದ ಕಾರು ಪೊಲಿಪು ಮಸೀದ ಬಳಿಯಿಂದ ರಾಂಗ್ ಸೈಡ್ನಲ್ಲಿ ಪರಾರಿಯಾಗಲು ಯತ್ನಿಸಿತ್ತು ಎಂದು ಸುಪ್ರೀತ್ ಶೆಟ್ಟಿ ತಿಳಿಸಿದ್ದಾರೆ.
ಕಾಪು ಪೊಲೀಸರು ಸ್ಥಳೀಯರ ಜೊತೆ ಸೇರಿ ಯುವ ಜೋಡಿಯನ್ನು ಕಾರು ಸಮೇತವಾಗಿ ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ಹೇಳಲಾಗಿದೆ. ವಶ ಪಡಿಸಿಕೊಂಡ ಜೋಡಿಯನ್ನು ಕಾಪು ಪೊಲೀಸರು ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯ ವಶಕ್ಕೆ ಒಪ್ಪಿಸಿದ್ದಾರೆ ಎಂದು ತಿಳಿದು ಬಂದಿದೆ.